ಸಾರಾಂಶ
‘ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಬಲಿಯಾದವರು ಮುಸ್ಲಿಂ ಸಮುದಾಯದವರು. ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಮುಸ್ಲಿಮರ ಕುರಿತು ಸಹಾನುಭೂತಿ ಇದ್ದರೆ ಅದೇ ಸಮುದಾಯದವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಿ.
ಹಿಸಾರ್ (ಹರ್ಯಾಣ): ‘ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಬಲಿಯಾದವರು ಮುಸ್ಲಿಂ ಸಮುದಾಯದವರು. ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಮುಸ್ಲಿಮರ ಕುರಿತು ಸಹಾನುಭೂತಿ ಇದ್ದರೆ ಅದೇ ಸಮುದಾಯದವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಿ. ಅಂತೆಯೇ, ಶೇ.50ರಷ್ಟು ಟಿಕೆಟ್ ಕೊಡಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಕ್ಕೆ ಸವಾಲೆಸೆದಿದ್ದಾರೆ.
ಇಲ್ಲಿನ ಮಹಾರಾಜ ಅಗ್ರಸೇನ ವಿಮಾನ ನಿಲ್ದಾಣದಿಂದ ಅಯೋಧ್ಯೆಗೆ ಮೊದಲ ವಾಣಿಜ್ಯ ವಿಮಾನ ಹಾರಾಟಕ್ಕೆ ಚಾಲನೆ ನೀಡಿ, ಹೊಸ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮೋದಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಅವರು, ‘ಕಾಂಗ್ರೆಸ್ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದವರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿಸಿದೆ. ಅಂತೆಯೇ, ಅಂಬೇಡ್ಕರ್ ಅವರ ಸಂವಿಧಾನವನ್ನು ಕಾಂಗ್ರೆಸ್ ನಾಶಪಡಿಸಿದ್ದು, ಅದನ್ನು ಅಧಿಕಾರಕ್ಕೇರುವ ಸಾಧನವಾಗಿ ಬಳಸುತ್ತಿದೆ. ಓಲೈಕೆ ರಾಜಕಾರಣದ ಭಾಗವಾಗಿ 2013ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು’ ಎಂದು ಆರೋಪಿಸಿದ್ದಾರೆ.
ಎಸ್ಸಿ, ಎಸ್ಟಿ, ಒಬಿಸಿ ಕಡೆಗಣನೆ: ‘ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾನತೆ ತರಲು ಬಯಸಿದರೆ, ಕಾಂಗ್ರೆಸ್ ಪಕ್ಷ ಮತ ಬ್ಯಾಂಕ್ ರಾಜಕಾರಣವನ್ನು ಹರಡಲು ಯತ್ನಿಸಿತು. ಬಡವರು ತಮ್ಮ ಕನಸುಗಳನ್ನು ಈಡೇರಿಸಿಕೊಂಡು ಘನತೆಯಿಂದ ಬದುಕಬೇಕು ಎಂಬುದು ಅವರ ಕನಸಾದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದವರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡಿತ್ತು’ ಎಂದು ಪ್ರಧಾನಿ ಮೋದಿ ಕಿಡಿಕಾರಿದರು. ಜೊತೆಗೆ ಆ ಪಕ್ಷ ಸಂವಿಧಾನವನ್ನು ಅಧಿಕಾರಕ್ಕೇರುವ ಸಾಧನವಾಗಿ ಬದಲಿಸಿಕೊಂಡಿತು ಎಂದು ದೂರಿದರು.
ಅಂಬೇಡ್ಕರ್‌ಗೆ ಅವಮಾನ: ವಿಪಕ್ಷವು ಅಂಬೇಡ್ಕರ್ ಅವರನ್ನು ಮೊದಲಿನಿಂದಲೂ ಅವಮಾನಿಸುತ್ತಲೇ ಇದೆ ಎಂದ ಮೋದಿ, ‘ಅವರು ಬದುಕಿದ್ದಾಗ 2 ಬಾರಿ ಚುನಾವಣೆಯಲ್ಲಿ ಸೋಲುವಂತೆ ಕಾಂಗ್ರೆಸ್ ಮಾಡಿ ಹೊರಗೋಡಿಸಲು ಪ್ರಯತ್ನಿಸಿತು. ಮರಣಾನಂತರ ಅವರ ನೆನಪುಗಳನ್ನು ಅಳಿಸಿ, ಅವರ ಆಲೋಚನೆಗಳನ್ನು ಮುಗಿಸಲು ನೋಡಿತು’ ಎಂದರು. ಅಂತೆಯೇ, ಕಾಂಗ್ರೆಸ್ ಅಂಬೇಡ್ಕರ್‌ಗೆ ಭಾರತ ರತ್ನವನ್ನೂ ನೀಡಲಿಲ್ಲ ಎಂದು ಟೀಕಿಸಿದರು.
ಇದೇ ವೇಳೆ ಬಿಜೆಪಿ ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸುತ್ತಿದೆ ಎಂದ ಪ್ರಧಾನಿ, ‘ಸಾಮಾಜಿಕ ನ್ಯಾಯ ಮತ್ತು ಬಡವರ ಕಲ್ಯಾಣ ಅಂಬೇಡ್ಕರ್ ಮತ್ತು ದೇಶಕ್ಕಾಗಿ ಪ್ರಾಣ ತೆತ್ತವರ ಕನಸಾಗಿತ್ತು. ನಾವು ಅದನ್ನು ನನಸುಗೊಳಿಸುತ್ತಿದ್ದೇವೆ. ನಮ್ಮ ಸರ್ಕಾರದ ಎಲ್ಲಾ ನಿರ್ಧಾರ ಮತ್ತು ನೀತಿಗಳು ಅಂಬೇಡ್ಕರ್ ಅವರಿಗೆ ಬದ್ಧವಾಗಿವೆ’ ಎಂದು ಹೇಳಿದರು.