ಸಾರಾಂಶ
ದೇಶದ ಅತಿ ದೊಡ್ಡ ಸಮುದ್ರದ ಮೇಲಿನ ಸೇತುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು. ಈ ಸೇತುವೆ 21.8 ಕಿಲೋಮೀಟರ್ ಅಳತೆಯದ್ದಾಗಿದೆ.
ಮುಂಬೈ: ‘10 ವರ್ಷಗಳ ಹಿಂದೆ ದೇಶದಲ್ಲಿ ಸಾವಿರಾರು ಕೋಟಿ ರು.ಗಳ ಬೃಹತ್ ಭ್ರಷ್ಟಾಚಾರ ಹಗರಣಗಳ ಬಗ್ಗೆ ಜನ ಮಾತನಾಡುತ್ತಿದ್ದರು. ಆದರೀಗ ಸಾವಿರಾರು ಕೋಟಿ ರು.ಗಳ ಬೃಹತ್ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಪರೋಕ್ಷ ಟಾಂಗ್ ನೀಡಿದ್ದಾರೆ.
17840 ಕೋಟಿ ರು. ವೆಚ್ಚದಲ್ಲಿ ಮುಂಬೈ ಮತ್ತು ನವಿ ಮುಂಬೈ ನಡುವೆ ನಿರ್ಮಾಣ ಮಾಡಲಾಗಿರುವ ಒಟ್ಟು 21.8 ಕಿ.ಮೀ ಉದ್ದವಿರುವ ಭಾರತದ ಅತಿ ಉದ್ದದ ಸಮುದ್ರ ಸೇತುವೆಯನ್ನು ಮೋದಿ ಶುಕ್ರವಾರ ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕಳೆದ 10 ವರ್ಷಗಳಿಂದ ದೇಶವು ತನ್ನ ಕನಸು ನನಸಾಗುತ್ತಿರುವುದನ್ನು ಕಾಣುತ್ತಿದೆ. ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’ ಭಾರತದ ಮೂಲಸೌಕರ್ಯದ ಶಕ್ತಿ ಎಂಥದ್ದು ಎಂಬುದನ್ನು ತೋರಿಸುತ್ತದೆ. ಅಲ್ಲದೇ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಿಟ್ಟಿನ ಹೆಜ್ಜೆಯಾಗಿದೆ’ ಎಂದರು.ಸೇತುವೆ ವೈಶಿಷ್ಟ್ಯ:ನೂತನ ಸೇತುವೆಗೆ ‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ - ನವಶೇವಾ ಅಟಲ್ ಸೇತು’ ಎಂದು ಹೆಸರಿಡಲಾಗಿದೆ. ಇದು ಮುಂಬೈ ಟ್ರಾನ್ಸ್- ಹಾರ್ಬರ್ ಲಿಂಕ್ ಸೇತುವೆಯಾಗಿದ್ದು, ಇದು ಮುಂಬೈ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಪ್ರಯಾಣದ ಅವಧಿಯನ್ನು 2 ಗಂಟೆಯಿಂದ 20 ನಿಮಿಷಕ್ಕೆ ಇಳಿಸಲಿದೆ. ಅಲ್ಲದೇ ಈ ಸೇತುವೆಯಿಂದ ಎರಡೂ ಸ್ಥಳಗಳ ನಡುವಿನ ಪ್ರಯಾಣಕ್ಕೆ ತಗುಲಬಹುದಾದ ಸುಮಾರು 500 ರು. ಬೆಲೆಯ ಇಂಧನ ಉಳಿತಾಯವಾಗಲಿದೆ.