ಸಾರಾಂಶ
ಪೋರ್ಟ್ ಆಫ್ ಸ್ಪೇನ್: 5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬಾಗೊ ದೇಶ ಶುಕ್ರವಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿಗೆ ದೊರೆತ 25ನೇ ಅಂತಾರಾಷ್ಟ್ರೀಯ ಗೌರವ.
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರು ಮೋದಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ’ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಪಡೆದು ಬಳಿಕ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದು, ‘140 ಕೋಟಿ ಭಾರತೀಯರ ಪರವಾಗಿ ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದಿದ್ದಾರೆ. ಗುರುವಾರವಷ್ಟೇ ಘಾನಾ ಸರ್ಕಾರ ಮೋದಿಗೆ ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ನೀಡಿ ಗೌರವಿಸಲಾಗಿತ್ತು.ನವ ಭಾರತಕ್ಕೆ ಆಗಸವೂ ಮಿತಿಯಲ್ಲ: ಮೋದಿ
ಭಾರತಕ್ಕೆ ಶೀಘ್ರ ವಿಶ್ವದ ಅಗ್ರ 3 ಆರ್ಥಿಕತೆಯಲ್ಲಿ ಸ್ಥಾನ: ಮೋದಿಕೆರಿಬಿಯನ್‌ನ ದ್ವೀಪರಾಷ್ಟ್ರ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಭಾಷಣ
ಭಾರತದ ಡಿಜಿಟಲೀಕರಣ, ಆರ್ಥಿಕತೆ, ಉದ್ಯಮ, ಮಹಾಕುಂಭದ ಉಲ್ಲೇಖ==ಪೋರ್ಟ್ ಆಫ್ ಸ್ಪೇನ್: ‘ಭಾರತವು ಶೀಘ್ರದಲ್ಲೇ ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ಮತ್ತು ಕ್ವಾಂಟಂ ಕಂಪ್ಯೂಟಿಂಗ್‌ನಲ್ಲಿನ ಭಾರತದ ಹೆಜ್ಜೆಗಳು ಅಭಿವೃದ್ಧಿಯ ಹೊಸ ಎಂಜಿನ್‌ಗಳಾಗುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆರಿಬಿಯನ್‌ನ ದ್ವೀಪರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬಾಗೊ ಪ್ರವಾಸದಲ್ಲಿರುವ ಮೋದಿ, ಅಲ್ಲಿನ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್, ಸಂಸತ್ ಸದಸ್ಯರು ಹಾಗೂ ಸುಮಾರು 4,000 ಭಾರತೀಯ ನಾಗರಿಕರನ್ನುದ್ದೇಶಿಸಿ ಮಾತನಾಡಿದರು.
ನವ ಭಾರತಕ್ಕೆ ಆಕಾಶವೂ ಮಿತಿಯಲ್ಲ:
‘ಭಾರತವು ಅವಕಾಶಗಳ ಭೂಮಿ. ಭಾರತದ ಬೆಳವಣಿಗೆ ಮತ್ತು ಪ್ರಗತಿಯ ಫಲಗಳು ತೀರಾ ಅಗತ್ಯವುಳ್ಳ ಜನಗಳಿಗೆ ತಲುಪುತ್ತಿವೆ. ನವ ಭಾರತಕ್ಕೆ ಆಕಾಶವೂ ಮಿತಿಯಲ್ಲ. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ನಾವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗುತ್ತೇವೆ. ಎಐ, ಸೆಮಿಕಂಡಕ್ಟರ್ ಮತ್ತು ಕ್ವಾಂಟಂ ಕಂಪ್ಯೂಟಿಂಗ್‌ನ ಕಾರ್ಯಾಚರಣೆಗಳು ಬೆಳವಣಿಗೆಯ ಹೊಸ ಎಂಜಿನ್‌ಗಳಾಗುತ್ತಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಡವರನ್ನು ಸಬಲೀಕರಣಗೊಳಿಸುವ ಮೂಲಕ ಬಡತನವನ್ನು ಹೋಗಲಾಡಿಸಬಹುದು ಎಂದು ಭಾರತ ತೋರಿಸಿದೆ. ಕೋಟ್ಯಂತರ ಜನರು ಮೊದಲ ಬಾರಿಗೆ ದೇಶವನ್ನು ಬಡತನದಿಂದ ಮುಕ್ತಗೊಳಿಸಬಹುದು ಎಂಬ ವಿಶ್ವಾಸವನ್ನು ಬೆಳೆಸಿಕೊಂಡಿದ್ದಾರೆ. ಭಾರತದ ಬೆಳವಣಿಗೆಗೆ ಹೊಸತನದ ಮತ್ತು ಶಕ್ತಿಯುತ ಯುವಕರು ಶಕ್ತಿ ತುಂಬುತ್ತಿದ್ದಾರೆ.
ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿದೆ. ಈ ಸ್ಟಾರ್ಟ್‌ಅಪ್‌ಗಳಲ್ಲಿ ಸುಮಾರು ಅರ್ಧದಷ್ಟು ನಿರ್ದೇಶಕರು ಮಹಿಳೆಯರಾಗಿದ್ದಾರೆ. ಸುಮಾರು 120 ಸ್ಟಾರ್ಟ್‌ಅಪ್‌ಗಳು ಯೂನಿಕಾರ್ನ್ ಸ್ಥಾನಮಾನ ಪಡೆದಿವೆ. ವಿಶ್ವದ ಡಿಜಿಟಲ್ ವಹಿವಾಟುಗಳಲ್ಲಿ ಸುಮಾರು ಶೇ.50ರಷ್ಟು ಭಾರತದಲ್ಲಿ ನಡೆಯುತ್ತಿದೆ. ಈಗ ಹಣ ಕಳುಹಿಸುವುದು ‘ಶುಭೋದಯ’ ಸಂದೇಶ ಕಳಿಸಿದಷ್ಟೇ ಸುಲಭವಾಗಿದೆ’ ಎಂದು ತಿಳಿಸಿದರು.
ಮಣ್ಣನ್ನು ಬಿಟ್ಟರೂ ಆತ್ಮವನ್ನು ಬಿಡಲಿಲ್ಲ : ಅಲ್ಲಿನ ಭಾರತೀಯ ಪ್ರಜೆಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ಇಲ್ಲಿರುವ ಭಾರತೀಯರು ತಮ್ಮ ಮಣ್ಣನ್ನು ಬಿಟ್ಟರು, ಆದರೆ ಆತ್ಮವನ್ನಲ್ಲ. ಗಂಗಾ, ಯಮುನಾರನ್ನು ಬಿಟ್ಟು ಹೋದರು. ಆದರೆ ರಾಮಾಯಣವನ್ನು ತಮ್ಮ ಹೃದಯದಲ್ಲಿ ಹೊತ್ತುಕೊಂಡರು. ಇವರು ಕೇವಲ ವಲಸಿಗರಲ್ಲ. ಕಾಲಾತೀತ ನಾಗರಿಕತೆಯ ಸಂದೇಶವಾಹಕರು. ಅವರ ಕೊಡುಗೆಗಳು ಈ ದೇಶಕ್ಕೆ ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಯೋಜನ ನೀಡಿವೆ’ ಎಂದರು.
ಟ್ರಿನಿಡಾಡ್‌ಗೆ ಮಹಾಕುಂಭದ ಜಲ :‘ಈ ವರ್ಷದ ಆರಂಭದಲ್ಲಿ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಭೆಯಾದ ಮಹಾಕುಂಭ ನಡೆದಿದ್ದು ನಿಮಗೆಲ್ಲರಿಗೂ ತಿಳಿದಿದೆ. ಮಹಾಕುಂಭದ ನೀರನ್ನು ನನ್ನೊಂದಿಗೆ ಕರೆತಂದಿದ್ದೇನೆ. ಸರಯೂ ನದಿ ಮತ್ತು ಮಹಾಕುಂಭದ ಪವಿತ್ರ ನೀರನ್ನು ಇಲ್ಲಿನ ಗಂಗಾಧಾರಕ್ಕೆ ಅರ್ಪಿಸಲು ಪ್ರಧಾನಿ ಕಮಲಾಜಿಯವರನ್ನು ವಿನಂತಿಸುತ್ತೇನೆ. ಈ ಪವಿತ್ರ ಜಲಗಳು ಟ್ರಿನಿಡಾಡ್ ಮತ್ತು ಟೊಬಾಗೋದ ಜನರನ್ನು ಆಶೀರ್ವಾದಿಸಲಿ’ ಎಂದರು.