ಸಾರಾಂಶ
ವಿಯೆನ್ನಾ : ರಷ್ಯಾ ಬಳಿಕ ಆಸ್ಟ್ರಿಯಾಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಲ್ಲಿನ ಪ್ರಧಾನಿ ಕಾರ್ಲ್ ನೇಹ್ಯಾಮರ್ ನಡುವಿನ ದ್ವಿಪಕ್ಷೀಯ ಮಾತುಕತೆಗಳು ಫಲ ನೀಡಿವೆ. ಭಾರತ ಹಾಗೂ ಆಸ್ಟ್ರಿಯಾ ಇನ್ನೂ 10 ವರ್ಷಗಳಲ್ಲಿ ವಿವಿಧ ವಲಯಗಳಲ್ಲಿ ಸಹಕಾರ ತತ್ವದಡಿ ಸಾಗಲು ಒಪ್ಪಿಕೊಂಡಿದ್ದು, ಇದಕ್ಕಾಗಿ ನೀಲನಕ್ಷೆ ಸಿದ್ಧಮಾಡಿಕೊಂಡಿವೆ.
ದ್ವಿಪಕ್ಷೀಯ ಮಾತುಕತೆ ಬಳಿಕ ನೇಹ್ಯಾಮರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಇಂದು ನೇಹ್ಯಾಮರ್ ಮತ್ತು ನಾನು ಬಹಳ ಫಲಪ್ರದ ಚರ್ಚೆ ನಡೆಸಿದ್ದೇವೆ. ನಮ್ಮ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ಹೊಸ ವಲಯಗಳನ್ನು ಗುರುತಿಸಿದ್ದೇವೆ. ಮುಂಬರುವ ದಶಕದಲ್ಲಿ ಸಹಕಾರಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.
ಇದಕ್ಕೂ ಮುನ್ನ ನೇಹ್ಯಾಮರ್ ಅವರು ಮೋದಿ ಅವರನ್ನು ಬರಮಾಡಿಕೊಂಡು ತಬ್ಬಿಕೊಂಡರು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, ‘ಭಾರತ-ಆಸ್ಟ್ರಿಯಾ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ’ ಎಂದಿದೆ.ಇದು 40 ವರ್ಷಗಳ ನಂತರ ಆಸ್ಟ್ರಿಯಾಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ, 1983 ರಲ್ಲಿ ಇಂದಿರಾ ಗಾಂಧಿ ನೀಡಿದ ಭೇಟಿ ಕೊನೆಯದಾಗಿತ್ತು.