ಅಮರಾವತಿ ಕೇವಲ ನಗರವಲ್ಲ, ಕನಸಿನ ಸಾಕಾರ: ಪ್ರಧಾನಿ ಮೋದಿ

| N/A | Published : May 03 2025, 12:16 AM IST / Updated: May 03 2025, 05:02 AM IST

ಅಮರಾವತಿ ಕೇವಲ ನಗರವಲ್ಲ, ಕನಸಿನ ಸಾಕಾರ: ಪ್ರಧಾನಿ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

58 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಂಧ್ರಪ್ರದೇಶದ ಗ್ರೀನ್‌ಫೀಲ್ಡ್‌ ರಾಜಧಾನಿಯಾದ ‘ಅಮರಾವತಿ’ಯ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ.  

ಅಮರಾವತಿ: 58 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಂಧ್ರಪ್ರದೇಶದ ಗ್ರೀನ್‌ಫೀಲ್ಡ್‌ ರಾಜಧಾನಿಯಾದ ‘ಅಮರಾವತಿ’ಯ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ. ಇದೇ ವೇಳೆ ‘ಅಮರಾವತಿ ಕೇವಲ ನಗರವಲ್ಲ. ಅದರಿಂದ ಕನಸು ಸಾಕಾರಗೊಳ್ಳುತ್ತಿದೆ’ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಸಿಎಂ ಚಂದ್ರಬಾಬು ನಾಯ್ಡು ಕನಸಿನ ಯೋಜನೆಯಾದ ಅಮರಾವತಿ ನಿರ್ಮಾಣಕ್ಕೆ ಎರಡನೇ ಬಾರಿ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ‘ಅಮರಾವತಿ ಕೇವಲ ನಗರವಲ್ಲ. ಅದರಿಂದ ಕನಸು ನನಸಾಗಿದೆ. ಇದು ಆಂಧ್ರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ. ಇದು ಕೇವಲ ಕಾಂಕ್ರಿಟ್‌ ರಚನೆಗಳಲ್ಲ. ಬದಲಾಗಿ ಆಂಧ್ರ ಮತ್ತು ವಿಕಸಿತ ಭಾರತದ ಮಹತ್ವಾಕಾಂಕ್ಷೆಗಳ ಬಲವಾದ ಅಡಿಪಾಯ’ ಎಂದರು.

ಮುಂದುವರೆದಂತೆ ಮಾತನಾಡಿದ ಅವರು, ‘ ಅಮರಾವತಿ ಇಂದ್ರಲೋಕದ ರಾಜಧಾನಿಯಾಗಿತ್ತು. ಅಮರಾವತಿ ಆಂಧ್ರ ಪ್ರದೇಶದ ರಾಜಧಾನಿಯಾಗುತ್ತಿರುವುದು ಕಾಕತಾಳೀಯವಲ್ಲ. ಇದು ಸ್ವರ್ಣ ಆಂಧ್ರ ಸ್ಥಾಪನೆಯ ಸಂಕೇತ’ ಎಂದರು

ಚಂದ್ರಬಾಬು ನಾಯ್ಡು ಈ ಹಿಂದೆ ಸಿಎಂ ಆಗಿದ್ದ ಈ ಯೋಜನೆಗೆ ಮೊದಲ ಸಲ ಚಾಲನೆ ಸಿಕ್ಕಿತ್ತು. ದೇವತೆಗಳ ರಾಜಧಾನಿ ಎಂದು ಕರೆಯಲ್ಪಡುವ ಯೋಜನೆಗೆ 2015ರ ಅ.22ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆದರೆ 2009 ರಿಂದ 2024ರವರೆಗೆ ಆಂಧ್ರದಲ್ಲಿ ಅಧಿಕಾರ ನಡೆಸಿದ್ದ ಜಗನ್ ಕಾಲದಲ್ಲಿ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ನಾಯ್ಡು ಮತ್ತೆ ಮರುಜೀವ ನೀಡಲು ಹೊರಟಿದ್ದಾರೆ.

ಒಟ್ಟು 8,603 ಚದರ ಕಿ.ಮೀ. ಜಾಗವನ್ನು ರಾಜಧಾನಿ ಪ್ರದೇಶವೆಂದು ನಿಗದಿಪಡಿಸಲಾಗಿದ್ದು, ಅದರಲ್ಲಿ 217 ಚದರ ಕಿ.ಮೀ. ರಾಜಧಾನಿ ನಗರವಾದರೆ, 16.9 ಚದರ ಕಿ.ಮೀ. ಪ್ರಮುಖ ರಾಜಧಾನಿ ಪ್ರದೇಶವಾಗಿರಲಿದೆ. ಇದರಲ್ಲೇ 9 ವಿಷಯಾಧಾರಿತ ನಗರಗಳೂ ತಲೆಯೆತ್ತಲಿವೆ.

ಈ ಬಾರಿ ಆಂಧ್ರದಲ್ಲಿ ವಿಶ್ವ ಯೋಗ ದಿನ: ಪ್ರಧಾನಿ ಮೋದಿ ಭಾಗಿ

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಜೂ.21ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ. 

ಅಮರಾವತಿ ರಾಜಧಾನಿ ನಿರ್ಮಾಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯಾಗಿ ಇದು 10ನೇ ವರ್ಷ. ಈ ಬಾರಿ ಕಾರ್ಯಕ್ರಮ ಆಂದ್ರದ ವಿಜಾಗ್‌ನಲ್ಲಿ ನಡೆಯಲಿದೆ. ನನ್ನನ್ನು ಆಹ್ವಾನಿಸಿದ್ದಕ್ಕೆ ನಾಯ್ಡು ಅವರಿಗೆ ಧನ್ಯವಾದಗಳು. ಖಂಡಿತ ಬರುತ್ತೇನೆ’ ಎಂದರು. ಅಲ್ಲದೆ, ಯೋಗ ದಿನವನ್ನು ವ್ಯಾಪಕವಾಗಿ ಪ್ರಚುರಪಡಿಸುವಂತೆ ಆಂಧ್ರ ಪ್ರದೇಶದ ಜನರಿಗೆ ಮನವಿ ಮಾಡಿದರು.