ಮಾ.15ಕ್ಕೆ ಹೊಸ ಚುನಾವಣಾ ಆಯುಕ್ತರ ಆಯ್ಕೆ

| Published : Mar 11 2024, 01:18 AM IST

ಮಾ.15ಕ್ಕೆ ಹೊಸ ಚುನಾವಣಾ ಆಯುಕ್ತರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಆಯುಕ್ತ ಗೋಯಲ್‌ ದಿಢೀರ್‌ ರಾಜೀನಾಮೆ, ಪಾಂಡೆ ನಿವೃತ್ತಿ ಹಿನ್ನೆಲೆಯಲ್ಲಿ ಎರಡೂ ಖಾಲಿ ಇ.ಸಿ. ಸ್ಥಾನ ನೇಮಕ ಭರ್ತಿಗೆ ಮೋದಿ ಸಮಿತಿ ಚರ್ಚೆ ನಡೆಸಿ ಆಯ್ಕೆ ಮಾಡಲಿದೆ.

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಅರುಣ್‌ ಗೋಯಲ್‌ ಅವರ ದಿಢೀರ್‌ ರಾಜೀನಾಮೆ ಕಾರಣ ಹೊಸ ಚುನಾವಣಾ ಆಯುಕ್ತರ ನೇಮಕಕ್ಕಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಮಾ.15ಕ್ಕೆ ಸಭೆ ಸೇರಲಿದೆ.ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಆಯೋಗದಲ್ಲಿ ಮೂವರು ಸದಸ್ಯರಿರುತ್ತಾರೆ. ಈ ಪೈಕಿ ಓರ್ವ ಆಯುಕ್ತ ಅನೂಪ್‌ ಪಾಂಡೆ ಕಳೆದ ತಿಂಗಳ ನಿವೃತ್ತರಾಗಿದ್ದರು. ಇದೀಗ ಗೋಯಲ್‌ ರಾಜೀನಾಮೆ ಕಾರಣ ಆಯೋಗದಲ್ಲಿ ಕೇವಲ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ಮಾತ್ರ ಉಳಿದುಕೊಂಡಿದ್ದಾರೆ. ಹೀಗಾಗಿ ತೆರವಾಗಿರುವ ಗೋಯಲ್‌ ಹಾಗೂ ಪಾಂಡೆ ಸ್ಥಾನಗಳ ಭರ್ತಿಗೆ ಚುನಾವಣಾ ಆಯುಕ್ತರ ಆಯ್ಕೆಗೆ ಇರುವ ಸಮಿತಿ ಮಾ.15ಕ್ಕೆ ಸಭೆ ಸೇರಲು ನಿರ್ಧರಿಸಿದೆ. ಪ್ರಧಾನಿ, ಲೋಕಸಭೆಯಲ್ಲಿನ ವಿಪಕ್ಷ ನಾಯಕ ಮತ್ತು ಕೇಂದ್ರ ಸಚಿವರನ್ನು ಒಳಗೊಂಡ ಸಮಿತಿ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುತ್ತದೆ. ಬಳಿಕ ರಾಷ್ಟ್ರಪತಿ ಈ ನೇಮಕ ಮಾಡುತ್ತಾರೆ.

ಕೇವಲ ಒಬ್ಬ ಚುನಾವಣಾ ಆಯುಕ್ತರನ್ನು ಇಟ್ಟುಕೊಂಡು ನ್ಯಾಯಸಮ್ಮತ ಚುನಾವಣೆ ಸಾಧ್ಯವೇ ಎಂದು ವಿಪಕ್ಷಗಳು ಪ್ರಶ್ನೆ ಮಾಡಿರುವ ಹಿನ್ನೆಲೆಯಲ್ಲಿ ಹೊಸ ಆಯುಕ್ತರ ನೇಮಕ ಮಹತ್ವ ಪಡೆದಿದೆ. ಸಿಇಸಿ, ಗೋಯಲ್‌ ನಡುವೆ ಭಿನ್ನಾಭಿಪ್ರಾಯ?ಆಯುಕ್ತ ಅರುಣ್‌ ಗೋಯಲ್‌ ಇತ್ತೀಚೆಗೆ ಚುನಾವಣಾ ಸಿದ್ಧತೆ ಪರಿಶೀಲಿಸಲು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಅಲ್ಲಿಯೂ ಅಂತಿಮ ದಿನ ಅವರು ಸಿಇಒ ರಾಜೀವ್‌ ಕುಮಾರ್‌ ಜೊತೆ ಪತ್ರಿಕಾಗೋಷ್ಠಿಗೆ ಹಾಜರಾಗಿರಲಿಲ್ಲ. ಅದಾದ ಬೆನ್ನಲ್ಲೇ ಸಮಿತಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ಲೋಕಸಭೆಯ ಜೊತೆಗೆ ಕಾಶ್ಮೀರದ ವಿಧಾನಸಭೆ ಚುನಾವಣಾ ನಡೆಸುವ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ ಅದರ ಬೆನ್ನಲ್ಲೇ ಅರುಣ್‌ ಗೋಯಲ್‌ ರಾಜೀನಾಮೆ ನೀಡಿದ್ದಾರೆ. ಬಂಗಾಳದಲ್ಲಿ ಗೋಯಲ್‌ ಹಾಗೂ ಕುಮಾರ್‌ ನಡುವೆ ಚುನಾವಣೆ ನಡೆಸುವ ಸಂಬಂಧ ನಡೆದ ವಾಗ್ವಾದವೇ ಗೋಯಲ್‌ ರಾಜೀನಾಮೆಗೆ ಕಾರಣ ಎನ್ನಲಾಗಿದೆ.ಒಬ್ಬರೇ ಚುನಾವಣೆ ಘೋಷಿಸಬಹುದು: ತಜ್ಞರುಚುನಾವಣಾ ಆಯೋಗ ಒಬ್ಬರೇ ಆಯುಕ್ತರನ್ನು ಹೊಂದಿಯೂ ಚುನಾವಣೆ ನಡೆಸಲು ದೇಶದ ಸಂವಿಧಾನದ ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಇದೇ ಸ್ಥಿತಿಯಲ್ಲಿ ಲೋಕಸಭಾ ಚುನಾವಣೆ ನಡೆಸುವುದು ಕಾನೂನು ಬಾಹಿರ ಅಲ್ಲ ಎನ್ನುವುದು ಸಂವಿಧಾನ ತಜ್ಞರ ವಾದ.ಜೊತೆಗೆ ಆಯೋಗ ಕೇವಲ ಒಬ್ಬರೇ ಆಯುಕ್ತರನ್ನು ಹೊಂದಿದ್ದ ಪ್ರಸಂಗ ಇದೇ ಮೊದಲಲ್ಲ. 2015ರಲ್ಲಿ ನಸೀಂ ಝೈದಿ ಮುಖ್ಯ ಚುನಾವಣಾ ಆಯುಕ್ತರಾದ ಬಳಿಕ ಹಲವು ತಿಂಗಳ ಕಾಲ ಉಳಿದ ಎರಡು ಹುದ್ದೆ ಖಾಲಿ ಇದ್ದವು ಎಂದು ದಾಖಲೆಗಳು ಹೇಳುತ್ತವೆ.