ಸಾರಾಂಶ
ಆಜಂಗಢ: ಉತ್ತರ ಪ್ರದೇಶ ಅಭಿವೃದ್ಧಿಯ ಸುನಾಮಿ ವೇಗವಾಗಿ ಸಾಗುತ್ತಿದ್ದು, ಇದರ ನಡುವೆ ಓಲೈಕೆ ರಾಜಕಾರಣ ಮತ್ತು ಸ್ವಜನಪಕ್ಷಪಾತಗಳು ಕೊಚ್ಚಿಕೊಂಡು ಹೋಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ, ಯಾದವ್ ಕುಟುಂಬದ ಭದ್ರಕೋಟೆಯೆಂದು ಬಿಂಬಿತವಾಗಿರುವ ಆಜಂಗಢದಲ್ಲಿ ವಾಗ್ದಾಳಿ ನಡೆಸಿದರು. ಆಜಂಗಢದಲ್ಲಿ ಉತ್ತರ ಪ್ರದೇಶದ 42 ಸಾವಿರ ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ‘ಸಮಾಜವಾದಿ ಪಕ್ಷದ ಯಾದವ್ ಕುಟುಂಬ ಆಜಂಗಢವನ್ನು ತಮ್ಮ ಭದ್ರಕೋಟೆಯೆಂದು ಪರಿಗಣಿಸಿದ್ದಕ್ಕೆ ಜನ ಉಪಚುನಾವಣೆಯಲ್ಲಿ ಅವರ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.
ಇದೇ ವೇಳೆ, ‘ಕೆಲವರು ನನಗೆ ಕುಟುಂಬವಿಲ್ಲ ಎಂದು ಮೂದಲಿಸುತ್ತಾರೆ. ಆದರೆ ದೇಶಾದ್ಯಂತ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಒಳಿತನ್ನು ಮಾಡಿ ದೇಶದ ಜನರು ನನ್ನ ಪರಿವಾರವಾಗಿದ್ದಾರೆ ಎಂಬುದನ್ನು ಅವರು ಮರೆತು ನನ್ನನ್ನು ಮೂದಲಿಸುತ್ತಾರೆ’ ಎಂದು ಪರೋಕ್ಷವಾಗಿ ಲಾಲು ಪ್ರಸಾದ್ ಯಾದವ್‌ಗೆ ತಿರುಗೇಟು ನೀಡಿದರು. ಅಭಿವೃದ್ಧಿಯಲ್ಲಿ ಹೊಸ ಭಾಷ್ಯ:ಈ ವೇಳೆ ಅಭಿವೃದ್ಧಿಯ ವೇಗದ ಕುರಿತು ಮಾತನಾಡುತ್ತಾ, ‘ಒಂದು ಕಾಲದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆಗೆ ಸಾಕ್ಷಿಯಾಗಲು ವಿವಿಧ ರಾಜ್ಯಗಳಿಂದ ದೆಹಲಿಗೆ ಜನ ಆಗಮಿಸುತ್ತಿದ್ದರು. ಆದರೆ ಇಂದು ಇಡೀ ದೇಶದ ಅಭಿವೃದ್ಧಿ ಯೋಜನೆಗೆ ಆಜಂಗಢದ ಮೂಲಕ ಚಾಲನೆ ನೀಡಲಾಗಿದೆ. ಈ ಮೂಲಕ ಆಜಂಗಢ ಅಭಿವೃದ್ಧಿಯಲ್ಲಿ ಹೊಸ ಮನ್ವಂತರದತ್ತ ಸಾಗಿ ಹೊಸ ಭಾಷ್ಯ ಸೃಷ್ಟಿಸಿದೆ’ ಎಂದು ಶ್ಲಾಘಿಸಿದರು.