ಸಾರಾಂಶ
ಜುಲೈ 2ನೇ ವಾರದಲ್ಲಿ ಮೋದಿ ರಷ್ಯಾ ಪ್ರವಾಸ ಮಾಡುವ ಸಾಧ್ಯತೆಯಿದ್ದು, ಪುಟಿನ್ ಜೊತೆಗೆ ವಾರ್ಷಿಕ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.
ನವದೆಹಲಿ: ಉಕ್ರೇನ್ ಜೊತೆಗೆ ಕಳೆದ ಎರಡೂವರೆ ವರ್ಷಗಳಿಂದ ಯುದ್ಧ ನಡೆಸುತ್ತಿರುವ ನಡುವೆಯೇ ತಮ್ಮ ಮೂರನೇ ಅವಧಿಯ ಮೊದಲ ರಷ್ಯಾ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸುತ್ತಿದ್ದು, ಜುಲೈ 2ನೇ ವಾರ ರಷ್ಯಾಗೆ ತೆರಳಿ ಅಧ್ಯಕ್ಷ ಪುಟಿನ್ ಅವರೊಂದಿಗೆ ವಾರ್ಷಿಕ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ.
ವ್ಲಾಡಿಮಿರ್ ಪುಟಿನ್ ಸಹ ಇತ್ತೀಚೆಗೆ ರಷ್ಯಾ ಅಧ್ಯಕ್ಷರಾಗಿ ಮರುಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.ಇದಕ್ಕೂ ಮೊದಲು ರಷ್ಯಾ ಉಕ್ರೇನ್ ಯುದ್ಧವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಮಾತ್ರ ಬಗೆಹರಿಸಿಕೊಳ್ಳಬೇಕು ಎಂದು ತನ್ನ ನಿಲುವು ವ್ಯಕ್ತಪಡಿಸುತ್ತಿರುವ ಭಾರತ ಈ ಕುರಿತಾಗಿ ಇತ್ತೀಚೆಗೆ ಸ್ವಿಜ಼ರ್ಲೆಂಡ್‌ನಲ್ಲಿ ನಡೆದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ ಎಂಬುದು ಗಮನಾರ್ಹ. ಈ ವೇಳೆ ಶಸ್ತ್ರಾಸ್ತ್ರ ಪೂರೈಕೆ ಜೊತೆಗೆ ಇನ್ನಿತರ ಮಹತ್ವದ ವಿಷಯಗಳನ್ನು ಚರ್ಚಿಸುವ ಸಾಧ್ಯತೆಯಿದೆ.