ಶೇ.10 ಖಾದ್ಯ ತೈಲ ಕಡಿಮೆ ಸೇವಿಸಿ ಬೊಜ್ಜು ಇಳಿಸಿ : ದೇಶ ವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ

| N/A | Published : Feb 24 2025, 12:30 AM IST / Updated: Feb 24 2025, 05:42 AM IST

ಸಾರಾಂಶ

ಖಾದ್ಯ ತೈಲವನ್ನು ಶೇ.10ರಷ್ಟು ಕಡಿಮೆ ಸೇವಿಸುವ ಮೂಲಕ ಬೊಜ್ಜು ಇಳಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಸಲಹೆ ನೀಡಿದ್ದಾರೆ.

 ನವದೆಹಲಿ : ಖಾದ್ಯ ತೈಲವನ್ನು ಶೇ.10ರಷ್ಟು ಕಡಿಮೆ ಸೇವಿಸುವ ಮೂಲಕ ಬೊಜ್ಜು ಇಳಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಸಲಹೆ ನೀಡಿದ್ದಾರೆ.

ತಮ್ಮ ಮಾಸಿಕ ‘ಮನ್ ಕೀ ಬಾತ್‌’ನಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೊಜ್ಜಿನ ಬಗ್ಗೆ ಮಾತನಾಡಿದ್ದೆ. ಅದು ಹೊಸ ಚರ್ಚೆ ಹುಟ್ಟುಹಾಕಿದೆ. ನಮ್ಮ ದೇಶವನ್ನು ಆರೋಗ್ಯದಾಯಕ ದೇಶ ಮಾಡಲು ಬೊಜ್ಜಿನ ಸಮಸ್ಯೆ ನಿವಾರಿಸಲೇಬೇಕು. ಖಾದ್ಯ ತೈಲದ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡುವುದು ಬೊಜ್ಜಿನ ಸಮಸ್ಯೆಗೆ ರಾಮಬಾಣ. 

ನೀವು ಪ್ರತಿ ತಿಂಗಳು 10% ಕಡಿಮೆ ತೈಲವನ್ನು ಬಳಸೋಣ ಎಂದು ನಿರ್ಧರಿಸಿ. ಅಡುಗೆಗೆ ಎಣ್ಣೆ ಖರೀದಿಸುವಾಗಲೇ ನೀವು 10% ಕಡಿಮೆ ತೈಲ ಖರೀದಿಸಿ. ಇದು ಬೊಜ್ಜು ಕಡಿಮೆ ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಲಿದೆ’ ಎಂದರು. 

‘2022 ರಲ್ಲಿ ಪ್ರಪಂಚದಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕ ಹೊಂದಿದ್ದರು. ಒಂದು ಅಧ್ಯಯನದ ಪ್ರಕಾರ, ಇಂದು ಪ್ರತಿ 8 ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಬೊಜ್ಜಿನ ಪ್ರಕರಣಗಳು ದ್ವಿಗುಣಗೊಂಡಿವೆ, ಆದರೆ, ಇನ್ನೂ ಆತಂಕಕಾರಿ ಸಂಗತಿಯೆಂದರೆ ಮಕ್ಕಳಲ್ಲಿಯೂ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆಈ ಸವಾಲನ್ನು ಸಣ್ಣ ಪ್ರಯತ್ನಗಳಿಂದ ನಿಭಾಯಿಸಬಹುದು’ ಎಂದರು.

ಮಹಿಳಾ ದಿನಕ್ಕೆ ಮೋದಿ ವಿಶಿಷ್ಟ ಕೊಡುಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾ.8ರಂದು ಟ್ವೀಟರ್‌ ಸೇರಿ ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮಗಳ ನಿರ್ವಹಣೆಯ ಜವಾಬ್ದಾರಿಯನ್ನು ಕೆಲ ಸಾಧಕ ಮಹಿಳೆಯರಿಗೆ ವಹಿಸಲಿದ್ದಾರೆ. ಈ ಮೂಲಕ ಅವರು ಮಹಿಳಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಿದ್ದಾರೆ.

ಆ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು ತಮ್ಮ ಕೆಲಸ ಹಾಗೂ ಅನುಭವಗಳ ಕುರಿತು ಮೋದಿ ಅವರ ಖಾತೆಗಳಲ್ಲಿ ಮಾತನಾಡಲಿದ್ದಾರೆ.ಈ ಕುರಿತ ಮಾಹಿತಿಯನ್ನು ತಮ್ಮ ಮನ್‌ ಕಿ ಬಾತ್‌ ಭಾಷಣದಲ್ಲಿ ಹಂಚಿಕೊಂಡಿರುವ ಪ್ರಧಾನಿಯವರು, ‘ಮಹಿಳೆಯರ ಅದಮ್ಯ ಸಾಧನೆಯನ್ನು ಸಂಭ್ರಮಿಸಿ ಗೌರವಿಸೋಣ’ ಎಂದು ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ಮೋದಿ, 2020ರ ಮಹಿಳಾ ದಿನದಂದು 7 ಮಹಿಳಾ ಸಾಧಕರಿಗೆ ತಮ್ಮ ಖಾತೆಗಳನ್ನು ನಿರ್ವಹಿಸಲು ನೀಡಿದ್ದರು.