ಕಾವೇರಿ ಕುಂಭಮೇಳ, ಬೆಂಗಳೂರು ಪಿಕ್ಸೆಲ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ

| Published : Jan 20 2025, 01:31 AM IST / Updated: Jan 20 2025, 04:31 AM IST

PM Modi

ಸಾರಾಂಶ

ಕುಂಭಮೇಳಗಳು ವಿವಿಧತೆಯಲ್ಲಿ ಏಕತೆ ಸಾರುತ್ತದೆ ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಕಾವೇರಿ ತಟದಲ್ಲಿ ಫೆ.10ರಿಂದ 12ರವರೆಗೆ ಟಿ-ನರಸೀಪುರದಲ್ಲಿ ನಡೆಯುವ ಕುಂಭಮೇಳದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

ನವದೆಹಲಿ: ಕುಂಭಮೇಳಗಳು ವಿವಿಧತೆಯಲ್ಲಿ ಏಕತೆ ಸಾರುತ್ತದೆ ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಕಾವೇರಿ ತಟದಲ್ಲಿ ಫೆ.10ರಿಂದ 12ರವರೆಗೆ ಟಿ-ನರಸೀಪುರದಲ್ಲಿ ನಡೆಯುವ ಕುಂಭಮೇಳದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇತ್ತೀಚೆಗೆ ಅಮೆರಿಕದ ಸ್ಪೇಸ್‌ಎಕ್ಸ್‌ ನೌಕೆಯ ಮೂಲಕ ಉಪಗ್ರಹ ಹಾರಿಸಿದ ಬೆಂಗಳೂರಿನ ಪಿಕ್ಸೆಲ್‌ ಎಂಬ ಟೆಕ್‌ ಸ್ಟಾರ್ಟಪ್‌ನ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಭಾನುವಾರ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣ ಮಾಡಿದ ಮೋದಿ, ‘ಉತ್ತರದಿಂದ ದಕ್ಷಿಣದವರೆಗೆ ಆಚಾರ ವಿಚಾರ ನಂಬಿಕೆಗಳನ್ನು ಅನುಸರಿಸುವ ವಿಧಾನಗಳು ಒಂದೇ ರೀತಿ ಆಗಿವೆ. ಒಂದೆಡೆ, ಪ್ರಯಾಗರಾಜ್, ಉಜ್ಜಯಿನಿ, ನಾಸಿಕ್ ಮತ್ತು ಹರಿದ್ವಾರದಲ್ಲಿ ಕುಂಭಮೇಳ ಆಯೋಜಿಸಲಾಗುತ್ತದೆ. ಅದೇ ರೀತಿ, ದಕ್ಷಿಣ ಭಾಗದಲ್ಲಿ, ಗೋದಾವರಿ, ಕೃಷ್ಣ, ನರ್ಮದಾ ಮತ್ತು ಕಾವೇರಿ ನದಿಗಳ ದಡದಲ್ಲಿ (ಟಿ-ನರಸೀಪುರ ಕಾವೇರಿ ತಟದಲ್ಲಿ) ಪುಷ್ಕರಗಳನ್ನು ಆಯೋಜಿಸಲಾಗುತ್ತದೆ. ಈ ಎರಡೂ ಉತ್ಸವಗಳು ನಮ್ಮ ಪವಿತ್ರ ನದಿಗಳು ಮತ್ತು ಅವುಗಳ ಆಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ’ ಎಂದರು.

ಪಿಕ್ಸೆಲ್‌ ಬಗ್ಗೆ ಮೆಚ್ಚುಗೆ: ಅಮೆರಿಕದ ಸ್ಪೇಸ್‌ ಎಕ್ಸ್‌ ಸಂಸ್ಥೆಯ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಹಾರಿಬಿಟ್ಟ ಬೆಂಗಳೂರಿನ ಪಿಕ್ಸೆಲ್‌ ಕಂಪನಿಯ ಕುರಿತೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರು ಮೂಲದ ಭಾರತದ ಸ್ಪೇಸ್‌ ಟೆಕ್‌ ಸ್ಟಾರ್ಟಪ್‌ ಸಂಸ್ಥೆಯಾದ ಪಿಕ್ಸೆಲ್‌ ದೇಶದ ಮೊದಲ ಖಾಸಗಿ ಉಪಗ್ರಹಗಳ ಸಮೂಹವಾದ ‘ಫೈಲ್‌ಪ್ಲೈ’ ಅನ್ನು ಯಶಸ್ವಿಯಾಗಿ ಗಗನದಲ್ಲಿ ಕೂರಿಸಿದೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಇದು ವಿಶ್ವದ ಪ್ರಮುಖ ಹೈರೆಸಲ್ಯೂಷನ್‌ ಹೈಪರ್‌ಸ್ಪೆಕ್ಟ್ರಲ್‌ ಉಪಗ್ರಹ ಸಮೂಹವಾಗಿದೆ. ಈ ಸಾಧನೆ ಭಾರತವನ್ನು ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ನಾಯಕನನ್ನಾಗಿ ಮಾಡಿದ್ದಷ್ಟೇ ಅಲ್ಲದೆ, ದೇಶವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಆತ್ಮನಿರ್ಭರತೆಯೆಡೆಗೆ ಕೊಂಡೊಯ್ಯುವಲ್ಲಿ ಬಹುದೊಡ್ಡ ಹೆಜ್ಜೆ ಇಟ್ಟಿದೆ’ ಎಂದು ತಿಳಿಸಿದರು.

’ಇದು ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳೆಯುತ್ತಿರುವ ದೇಶದ ಸಾಮರ್ಥ್ಯ ಮತ್ತು ಆವಿಷ್ಕಾರಗಳ ಹೆಜ್ಜೆಗುರುತಾಗಿದೆ. ಈ ಸಾಧನೆಗಾಗಿ ನಾನು ಪಿಕ್ಸೆಲ್‌, ಇಸ್ರೋ ಮತ್ತು ಐಎನ್‌-ಎಸ್‌ಪಿಎಸಿಇಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಮೋದಿ ಹೇಳಿದರು.