ದ್ವಾರಕಾದಲ್ಲಿ ಮೋದಿ ಸ್ಕೂಬಾ ಡೈವಿಂಗ್‌

| Published : Feb 26 2024, 01:30 AM IST / Updated: Feb 26 2024, 01:51 PM IST

ಸಾರಾಂಶ

ಸಮುದ್ರದೊಳಗೆ ಮುಳುಗಿದ ದ್ವಾರಕಾ ನಗರದ ಅವಶೇಷ ವೀಕ್ಷಣೆ ಮಾಡುವ ಮೂಲಕ ಲಕ್ಷದ್ವೀಪದಲ್ಲಿ ಸ್ನಾಕರ್ಲಿಂಗ್‌ ಬಳಿಕ ಮತ್ತೊಂದು ಸಮುದ್ರ ಸಾಹಸ ಮಾಡಿದ್ದಾರೆ.

ದ್ವಾರಕಾ: ಕಳೆದ ತಿಂಗಳಷ್ಟೇ ಲಕ್ಷದ್ವೀಪದಲ್ಲಿ ಸಮುದ್ರಕ್ಕಿಳಿದು ‘ಸ್ನಾಕರ್ಲಿಂಗ್‌’ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಂದು ಸಮುದ್ರ ಸಾಹಸ ನಡೆಸಿದ್ದಾರೆ. 

ವಿವಿಧ ಯೋಜನೆಗಳ ಉದ್ಘಾಟನೆಗಾಗಿ ತವರು ರಾಜ್ಯ ಗುಜರಾತ್‌ಗೆ ಆಗಮಿಸಿರುವ ಮೋದಿ, ಭಾನುವಾರ ದ್ವಾರಕಾದಲ್ಲಿ ‘ಸ್ಕೂಬಾ ಡೈವಿಂಗ್‌’ ಮಾಡುವ ಮೂಲಕ ಸಮುದ್ರದೊಳಗೆ ಮುಳುಗಿರುವ ಕೃಷ್ಣನ ನಗರಿ ದ್ವಾರಕೆಯ ಅವಶೇಷಗಳನ್ನು ವೀಕ್ಷಿಸಿದ್ದಾರೆ.

ಈ ಕುರಿತ ಮಾಹಿತಿಯನ್ನು ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ, ‘ಸಮುದ್ರದೊಳಗೆ ಮುಳುಗಿರುವ ದ್ವಾರಕಾ ನಗರಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಒಂದು ದೈವಿಕ ಅನುಭೂತಿ. 

ದ್ವಾರಕೆಯ ದರ್ಶನದೊಂದಿಗೆ ಅಧ್ಯಾತ್ಮಿಕ ಭವ್ಯತೆ ಮತ್ತು ಕಾಲತೀತ ಭಕ್ತಿಯ ಅನುಭವವನ್ನು ಪಡೆದುಕೊಂಡೆ. ಕೃಷ್ಣ ಭಗವಾನ್‌ ನಮ್ಮೆಲ್ಲರನ್ನೂ ಆಶೀರ್ವದಿಸಲಿ’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸ್ಕೂಬಾ ಡೈವಿಂಗ್‌ಗೆ ಅಗತ್ಯವಾದ ವಸ್ತ್ರ ಧರಿಸಿ ತಜ್ಞರೊಂದಿಗೆ ಸ್ಕೂಬಾ ಡೈವಿಂಗ್‌ ನಡೆಸಿದ ಪ್ರಧಾನಿ ಮೋದಿ, ಇದೇ ವೇಳೆ ನವಿಲುಗರಿಯನ್ನು ಸಮುದ್ರದಾಳದಲ್ಲಿರುವ ದ್ವಾರಕೆ ಕೃಷ್ಣನಿಗೆ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು. ಈ ಕುರಿತಾದ ಫೋಟೋ ಮತ್ತು ವಿಡಿಯೋಗಳನ್ನು ಮೋದಿ ಹಂಚಿಕೊಂಡಿದ್ದಾರೆ.

ಸ್ಕೂಬಾ ಡೈವಿಂಗ್‌ ಎಲ್ಲಿ?
ಅರಬ್ಬೀ ಸಮುದ್ರದಲ್ಲಿ ಬರುವ ಬೆಟ್‌ ದ್ವಾರಕಾ ದ್ವೀಪದ ದ್ವಾರಕಾ ಕರಾವಳಿಯಲ್ಲಿ ಈ ಸ್ಕೂಬಾ ಡೈವಿಂಗ್‌ ನಡೆಸಲು ಪ್ರವಾಸಿಗರಿಗೆ ಅವಕಾಶವಿದೆ. ಇದು ಮಹಾಭಾರತದ ಕಾಲದಲ್ಲಿ ಕೃಷ್ಣನ ರಾಜಧಾನಿ ಆಗಿದ್ದ ದ್ವಾರಕಾ ನಗರಿ ಎಂಬುದನ್ನು ಪ್ರಾಚ್ಯವಸ್ತು ಇಲಾಖೆಯ ತಜ್ಞರು ದಶಕಗಳ ಹಿಂದೆ ಪತ್ತೆ ಮಾಡಿದ್ದರು.

ಸಮುದ್ರದಾಳದಲ್ಲಿ ಕಂಡುಬರುವ ಅನೇಕ ಅವಶೇಷಗಳು ದ್ವಾರಕೆಯ ನೆನಪನ್ನು ಭಕ್ತರ ಮುಂದಿಡುತ್ತವೆ. ಇಲ್ಲಿ 15-20 ನಿಮಿಷದ ಸ್ಕೂಬಾ ಡೈವ್‌ಗೆ 2000- 3000 ರು.ವರೆಗೂ ಶುಲ್ಕವಿದೆ.