ತುರ್ತುಸ್ಥಿತಿ: ಮತ್ತೆ ಕಾಂಗ್ರೆಸ್‌ಗೆ ಮೋದಿ ಪ್ರಹಾರ

| Published : Jun 26 2024, 12:36 AM IST

ಸಾರಾಂಶ

ತುರ್ತುಸ್ಥಿತಿ ಹೇರಿದವರಿಗೆ ಸಂವಿಧಾನದ ಮೇಲೆ ಪ್ರೀತಿ ತೋರಿಸುವ ಹಕ್ಕಿಲ್ಲ ಎಮರ್ಜೆನ್ಸಿ ಹೇರಿದ ಮನಸ್ಥಿತಿ ಆ ಪಕ್ಷದಲ್ಲಿ ಜೀವಂತವಾಗಿದೆ ಎಂದು ಮೋದಿ ಕಿಡಿಕಾರಿದ್ದಾರೆ.

ನವದೆಹಲಿ: ‘ಕಾಂಗ್ರೆಸ್‌ ಹೇಗೆ ಮೂಲಭೂತ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿದೆ. ಪ್ರತಿಯೊಬ್ಬ ಭಾರತೀಯರು ಬಹುವಾಗಿ ಪ್ರೀತಿಸುವ ಸಂವಿಧಾನವನ್ನು ತುಳಿದಿದೆ ಎನ್ನುವುದನ್ನು ಆ ಕರಾಳ ದಿನಗಳು ಹೇಳುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸತತ 2ನೇ ದಿನವೂ ಟೀಕಿಸಿದ್ದಾರೆ.

ತುರ್ತು ಪರಿಸ್ಥಿತಿಗೆ ಮಂಗಳವಾರ 49 ವರ್ಷ ತುಂಬಿ 50ನೇ ವರ್ಷಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ, ಸರಣಿ ಟ್ವೀಟ್‌ ಮಾಡಿರುವ ಅವರು, ‘ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದವರಿಗೆ ಸಂವಿಧಾನದ ಮೇಲೆ ಪ್ರೀತಿ ತೋರಿಸುವ ಹಕ್ಕಿಲ್ಲ. ತುರ್ತು ಪರಿಸ್ಥಿತಿ ಹೇರಿದ ಮನಸ್ಥಿತಿಯು ಆ ಪಕ್ಷದಲ್ಲಿಇಂದಿಗೂ ಜೀವಂತವಾಗಿದೆ. ಅವರು ಸಂವಿಧಾನದ ಮೇಲೆ ತಿರಸ್ಕಾರ ಮರೆ ಮಾಚಲು ಪ್ರಯತ್ನಿಸುತ್ತಾರೆ. ಆದರೆ ಭಾರತದ ಜನರು ಈ ಹಿಂದಿನ ಅವರ ವರ್ತನೆಗಳನ್ನು ನೋಡಿದ್ದಾರೆ. ಹೀಗಾಗಿಯೇ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ’ ಎಂದಿದ್ದಾರೆ.

‘ಈ ವ್ಯಕ್ತಿಗಳೇ ಹಲವು ಸಂದರ್ಭದಲ್ಲಿ 356ನೇ ವಿಧಿಯನ್ನು ಹೇರಿದವರು. ಮಾಧ್ಯಮ ಸ್ವಾತಂತ್ರ್ಯವನ್ನು ನಿರ್ಬಂಧಿಸಿದವರು. ಸಂವಿಧಾನದ ಪ್ರತಿ ಮೌಲ್ಯವನ್ನು, ಸಂಯುಕ್ತ ವ್ಯವಸ್ಥೆಯನ್ನು ನಾಶಪಡಿಸಿದವರು. ಅಧಿಕಾರಕ್ಕೆ ಅಂಟಿಕೊಳ್ಳುವುದಕ್ಕಾಗಿ ಆಗಿನ ಕಾಂಗ್ರೆಸ್‌ ಸರ್ಕಾರವು ರಾಷ್ಟ್ರವನ್ನು ಜೈಲಿನಲ್ಲಿಟ್ಟಿತ್ತು. ಪಕ್ಷವನ್ನು ಒಪ್ಪದವರನ್ನು ಹಿಂಸಿಸಿ, ಕಿರುಕುಳ ನೀಡಲಾಯಿತು. ದುರ್ಬಲ ವರ್ಗ ಗುರಿಯಾಗಿಸಿಕೊಂಡು ತೀವ್ರಗಾಮಿ ನೀತಿಗಳನ್ನು ಬಿಚ್ಚಿಡಲಾಗಿತ್ತು’ ಎಂದು ಹರಿಹಾಯ್ದಿದ್ದಾರೆ.