ಸಾರಾಂಶ
ಭಾರತ ಮತ್ತು ರಷ್ಯಾ ಸಂಬಂಧದಿಂದ ಕುಪಿತರಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಬರೆ ಹಾಕುತ್ತಿರುವ ಹೊತ್ತಲ್ಲೇ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಶುಕ್ರವಾರ ಮಾತುಕತೆ ನಡೆಸಿದ್ದಾರೆ.
ನವದೆಹಲಿ: ಭಾರತ ಮತ್ತು ರಷ್ಯಾ ಸಂಬಂಧದಿಂದ ಕುಪಿತರಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಬರೆ ಹಾಕುತ್ತಿರುವ ಹೊತ್ತಲ್ಲೇ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಿರುವ ವಿಶೇಷ ಮತ್ತು ವ್ಯೂಹಾತ್ಮಕ ಪಾಲುದಾರಿಕೆಯ ಬದ್ಧತೆ ಪ್ರದರ್ಶಿಸಿದ್ದಾರೆ.
ಕರೆಯಲ್ಲಿ ಪುಟಿನ್, ಉಕ್ರೇನ್ ಜತೆಗಿನ ಸಂಘರ್ಷದ ಬಗ್ಗೆ ವಿವರಿಸಿದ್ದು, ಪ್ರಧಾನಿ ಮೋದಿ ಶಾಂತಿ ಸಂಧಾನವನ್ನು ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ಸ್ನೇಹಿತ ಅಧ್ಯಕ್ಷ ಪುಟಿನ್ ಅವರೊಂದಿಗೆ ಉತ್ತಮ ಮತ್ತು ಸುದೀರ್ಘ ಸಂಭಾಷಣೆ ನಡೆಸಿದೆ. ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಂಡರು. ಅಂತೆಯೇ, ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದೆವು. ಉಭಯ ದೇಶಗಳ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದೆವು. ವರ್ಷಾಂತ್ಯದಲ್ಲಿ ಪುಟಿನ್ ಅವರನ್ನು ಭಾರತಕ್ಕೆ ಬರಮಾಡಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದು ಬರೆದಿದ್ದಾರೆ.
ರಷ್ಯಾದಿಂದ ತೈಲ ತರಿಸಿಕೊಳ್ಳುತ್ತಿರುವ ಕಾರಣಕ್ಕೆ ಅಮೆರಿಕ ಭಾರತದ ಮೇಲೆ ಶೇ.25ರಷ್ಟು ಸುಂಕ ಹೇರಿ, ಇನ್ನೂ ಅಷ್ಟೇ ಪ್ರಮಾಣದ ದಂಡ ಘೋಷಿಸಿರುವ ಹೊತ್ತಿನಲ್ಲೇ ಈ ಬೆಳವಣಿಗೆ ಆಗಿರುವುದು ಗಮನಾರ್ಹ.