ರಾಮನಿಗಾಗಿ ಮೋದಿ 11 ದಿನ ವ್ರತಾಚರಣೆ!

| Published : Jan 13 2024, 01:31 AM IST

ಸಾರಾಂಶ

ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಇನ್ನು 11 ದಿನಗಳು ಬಾಕಿ ಇರುವ ಕಾರಣ ಅದರ ಶಾಸ್ತ್ರಾನುಸಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನ ತೆಗೆದುಕೊಂಡಿದ್ದಾರೆ. ಇವರು ಜ.22ರಂದು ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ.

ನವದೆಹಲಿ: ಅಯೋಧ್ಯೆಯಲ್ಲಿನ ರಾಮಮಂದಿರದಲ್ಲಿ ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ಮೊದಲು ಇಂತಹ ಭಾವುಕತೆಯನ್ನು ನಾನು ಅನುಭವಿಸಿರಲಿಲ್ಲ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಶಾಸ್ತ್ರಾನುಸಾರ ಮುಂದಿನ 11 ದಿನಗಳ ವ್ರತಾಚರಣೆ (ಅನುಷ್ಠಾನ) ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಜ.22ರ ರಾಮಮಂದಿರ ಉದ್ಘಾಟನೆಗೆ 11 ದಿನ ಬಾಕಿ ಉಳಿದಿರುವ ಬಗ್ಗೆ ಟ್ವೀಟರ್‌ನಲ್ಲಿ ಆಡಿಯೋ ಸಂದೇಶವನ್ನು ಹಂಚಿಕೊಂಡಿರುವ ಅವರು, ‘ನಾನು ಬಹಳ ಭಾವುಕನಾಗಿದ್ದೇನೆ. ನಾನು ಭಾವನೆಗಳಿಂದ ಮುಳುಗಿದ್ದೇನೆ. ಜೀವನದಲ್ಲಿ ಇದೇ ಮೊದಲ ಬಾರಿಗೆ ಜೀವನದಲ್ಲಿ ಇಷ್ಟೊಂದು ಭಾವುಕ ಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ಈ ಭಾವುಕ ಕ್ಷಣಗಳನ್ನು ಅನುಭವಿಸಬಹುದೇ ಹೊರತು ವ್ಯಕ್ತಪಡಿಸಲಾಗುತ್ತಿಲ್ಲ. ಇದು ರಾಮನ ಭಕ್ತರಿಗೆ ಮತ್ತು ಎಲ್ಲಾ ಭಾರತೀಯರಿಗೆ ಪವಿತ್ರ ಸಮಯವಾಗಿದ್ದು, ಎಲ್ಲರೂ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಕಾಯುತ್ತಿದ್ದಾರೆ. ಈ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ನನ್ನ ಅದೃಷ್ಟ’ ಎಂದು ಹೇಳಿದ್ದಾರೆ. ‘ಈ ಸಮಾರಂಭದಲ್ಲಿ ಭಾಗಿಯಾಗುವುದಕ್ಕೆ ನಾನು ಜನರ ಆಶೀರ್ವಾದವನ್ನು ಬೇಡುತ್ತೇನೆ. ಇದಕ್ಕಾಗಿ ನಾನು 11 ದಿನಗಳ ವ್ರತಾಚರಣೆಯನ್ನು ಕೈಗೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.ಮೋದಿ ಯಾವೆಲ್ಲಾ ಅನುಷ್ಠಾನ ಕೈಗೊಳ್ಳಬಹುದು?:ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗುತ್ತಿರುವ ಪ್ರಧಾನಿ ಮೋದಿ ಅವರು ಮುಂದಿನ 11 ದಿನಗಳ ಕಾಲ ಯಾವ ವ್ರತಾಚರಣೆ ಮಾಡುತ್ತಿದ್ದೇನೆ ಎಂಬುದನ್ನು ಹೇಳಿಲ್ಲ. ಆದರೆ ಬಿಡುವಿಲ್ಲದ ಕೆಲಸದ ನಡುವೆಯೂ 11 ದಿನಗಳ ‘ಯಾಮ ನಿಯಮ’ ಪಾಲಿಸಲು ಅವರು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಯಾಮ ನಿಯಮವೆಂದರೆ, ಸೂರ್ಯೋದಯಕ್ಕೂ ಮೊದಲೇ ಎದ್ದು, ಯೋಗ, ಪ್ರಾರ್ಥನೆ ಸಲ್ಲಿಸಬಹುದು. ಕೇವಲ ಹಣ್ಣು, ಹಾಲಿನಂಥ ಸಾತ್ವಿಕ ಆಹಾರವನ್ನಷ್ಟೇ ಸೇವಿಸಬಹುದು. ಇದಲ್ಲದೇ ನೆಲದ ಮೇಲೆ ಮಲಗಬಹುದು, ದಿನದ ಸಾಕಷ್ಟು ಸಮಯವನ್ನು ಮೌನಾಚರಣೆ ಮಾಡುತ್ತಾ ಭಗವಂತನ ಧ್ಯಾನದಲ್ಲಿ ಕಳೆಯಬಹುದು, ರಾಮನ ಜಪ ಮತ್ತು ಯಜ್ಞಗಳನ್ನು ಕೈಗೊಳ್ಳಬಹುದು, ಈ ಸಮಯದಲ್ಲಿ ಉಗುರು ಮತ್ತು ಕೂದಲನ್ನು ಕತ್ತರಿಸದೇ ಇರಬಹುದು ಎಂದು ಮೂಲಗಳು ತಿಳಿಸಿವೆ.

ಈ ವ್ರತಾಚರಣೆಯನ್ನು ಅವರು ಮಹಾರಾಷ್ಟ್ರದ ನಾಸಿಕ್‌ನ ಧಾಮ ಪಂಚವಟಿ ದೇಗುಲದಿಂದಲೇ ಆರಂಭಿಸಿದ್ದಾರೆ. ಅಲ್ಲಿ ಅವರು ಜಲಪೂಜೆ ನೆರವೇರಿಸಿ ದೇವರ ಭಜನೆಯಲ್ಲಿ ಪಾಲ್ಗೊಂಡರು ಹಾಗೂ ದೇಗುಲದ ಕಸ ಗುಡಿಸಿದರು.