ಸಾರಾಂಶ
ಆಜಂಗಢ (ಉ.ಪ್ರ.): ‘ಹಿಂದಿನ ಸರ್ಕಾರಗಳು ಕೇವಲ ಯೋಜನೆ ಘೋಷಿಸಿ ಬಳಿಕ ಅವುಗಳನ್ನು ಮರೆತು ಸುಮ್ಮನಾಗುತ್ತಿದ್ದವು. ಆದರೆ ನಾವು ಹಾಗಲ್ಲ, ಯೋಜನೆಗಳನ್ನು ಬರಿ ಘೋಷಿಸಿ ಸುಮ್ಮನಾಗಿಲ್ಲ, ಬದಲಾಗಿ ಪೂರ್ಣಗೊಳಿಸಿ ತೋರಿಸಿದ್ದೇವೆ.
ಹೀಗಾಗಿ ಇಂದು ದೇಶದ ಜನತೆ ‘ಮೋದಿ ಈ ಲೋಕದ ವ್ಯಕ್ತಿಯಲ್ಲ, ಬೇರೆಯದ್ದೇ ಲೋಕದ ವ್ಯಕ್ತಿ ಎಂಬುದನ್ನು ಕಂಡುಕೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಬಣ್ಣಿಸಿಕೊಂಡರು.
ಭಾನುವಾರ ಇಲ್ಲಿ ದೇಶದ ವಿವಿಧ ರಾಜ್ಯಗಳ 12 ವಿಸ್ತರಿತ ಟರ್ಮಿನಲ್‌ಗಳಿಗೆ ಚಾಲನೆ ಮತ್ತು ಹುಬ್ಬಳ್ಳಿ, ಬೆಳಗಾವಿ ಮತ್ತು ಕಡಪಾ ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ‘ಇಂದಿನ ಟರ್ಮಿನಲ್ ಉದ್ಘಾಟನೆಯೊಂದಿಗೆ ದೇಶದ ವಿಮಾನ ನಿಲ್ದಾಣಗಳ ವಾರ್ಷಿಕ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯ 6 ಕೋಟಿಗೆ ತಲುಪಿದೆ.
ಈ ವಿಮಾನ ನಿಲ್ದಾಣ, ಹೆದ್ಧಾರಿ ಮತ್ತು ರೈಲ್ವೆ ನಿಲ್ದಾಣಗಳ ಉದ್ಘಾಟನೆಯನ್ನು ಚುನಾವಣೆಯ ದೃಷ್ಟಿಕೋನದಿಂದ ನೋಡಬಾರದು. ಇದು ದೇಶವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸುವ ನನ್ನ ಅಭಿವೃದ್ಧಿಯ ಒಂದು ಪಯಣ’ ಎಂದು ಬಣ್ಣಿಸಿದರು.
‘ಹಿಂದೆಲ್ಲಾ ಸರ್ಕಾರಗಳು ಯೋಜನೆ ಘೋಷಿಸಿ ಸುಮ್ಮನಾಗಿ ಬಿಡುತ್ತಿದ್ದವು. ಅವುಗಳಿಗೆ ಏನಾಯಿತು ಎಂದು ಜನತೆ ಅಚ್ಚರಿಪಡುತ್ತಿದ್ದರು.
ಆದರೆ ಇಂದು ದೇಶದ ಜನತೆ ಮೋದಿ ಈ ಲೋಕದ ವ್ಯಕ್ತಿಯಲ್ಲ, ಬೇರೆಯದ್ದೇ ಲೋಕಕ್ಕೆ ಸೇರಿದ ವ್ಯಕ್ತಿ (ಮೋದಿ ದೂಸ್ರಿ ಮಿಟ್ಟಿ ಕೀ ಇನ್ಸಾನ್ ಹೈ) ಎಂಬುದನ್ನು ಕಂಡುಕೊಂಡಿದ್ದಾರೆ.
ಈಗ ಏನೆಲ್ಲಾ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆಯೋ ಅದನ್ನೆಲ್ಲಾ ಪೂರ್ಣಗೊಳಿಸಲಾಗುತ್ತಿದೆ’ ಎಂದು ಹೇಳಿದರು.