ಸಾರಾಂಶ
ನವದೆಹಲಿ: ಭಾರತದಲ್ಲಿ ಭ್ರಷ್ಟಾಚಾರ, ಅರಾಜಕತೆಯನ್ನು ಸೃಷ್ಟಿಸಿ ದೇಶವಿರೋಧಿ ಸಂಸ್ಕೃತಿಯನ್ನು ಉತ್ತೇಜಿಸುವ ಕಾನೂನುಗಳನ್ನು ಜಾರಿಗೆ ತರುವುದೇ ಪ್ರತಿಪಕ್ಷಗಳ ಇಂಡಿ ಮೈತ್ರಿಕೂಟದ ಮೂಲ ಗುರಿಯಾಗಿದ್ದು, ಭ್ರಷ್ಟಾಚಾರ ಮತ್ತು ತುಷ್ಟೀಕರಣವನ್ನು ತೊಡೆದು ಹಾಕುವುದೇ ಮೋದಿಯ ಗ್ಯಾರಂಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಕುರಿತ ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜನಕಲ್ಯಾಣದ ಮೂಲಕ ರಾಷ್ಟ್ರದ ಅಭಿವೃದ್ಧಿಯನ್ನು ಮಾಡುವುದು ನಮ್ಮ ಮೂಲಮಂತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸುಲಭ ದರದಲ್ಲಿ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ 62 ಲಕ್ಷ ಮಂದಿಗೆ ಬರೋಬ್ಬರಿ 11 ಸಾವಿರ ಕೋಟಿ ರು. ಸಾಲ ನೀಡುವ ಮೂಲಕ ಅವರ ಜೀವನವನ್ನು ಸುಧಾರಿಸಲಾಗಿದೆ.
ಆದರೆ ಕಾಂಗ್ರೆಸ್ ಮತ್ತು ಆಪ್ ಪಕ್ಷ ನಮ್ಮ ಯೋಜನೆಗಳನ್ನು ಪ್ರತಿನಿತ್ಯ ನಿಂದಿಸುವ ಸಲುವಾಗಿಯೇ ದೆಹಲಿಯಲ್ಲಿ ಮೈತ್ರಿ ಮಾಡಿಕೊಂಡಿವೆ’ ಎಂದು ಕಿಡಿ ಕಾರಿದರು. ಇದೇ ವೇಳದೆ ದಿಲ್ಲಿ ಮೆಟ್ರೋ ಫೇಸ್-4ಎ ಎರಡು ಹೊಸ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.