ಸಾರಾಂಶ
ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣಕಾರ್ಯ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಅಯೋಧ್ಯೆಗೆ ಆಗಮಿಸಲಿದ್ದು, ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಲಿದ್ದಾರೆ.
ನವದೆಹಲಿ/ಅಯೋಧ್ಯಾ : ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣಕಾರ್ಯ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಅಯೋಧ್ಯೆಗೆ ಆಗಮಿಸಲಿದ್ದು, ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಲಿದ್ದಾರೆ.
ಈ ನಿಮಿತ್ತ ಸೋಮವಾರದಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಮಂಗಳವಾರ ಬೆಳಿಗ್ಗೆ 11:58ರಿಂದ ಮಧ್ಯಾಹ್ನ 1 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಲಿದೆ. ಈ ದಿನ ಮಾರ್ಗಶಿರ ಶುಕ್ಲ ಪಂಚಮಿ ತಿಥಿಯಾಗಿದ್ದು, ಇದೇ ದಿನ ಶ್ರೀರಾಮ ಮತ್ತು ಸೀತೆಯರ ವಿವಾಹವಾಗಿತ್ತು. ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ಅಖಂಡ ತಪಸ್ಸು ಕೈಗೊಂಡ ಸಿಖ್ ಗುರು ತೇಗಬಹದ್ದೂರರ ಬಲಿದಾನ ದಿನವೂ ಇವತ್ತೇ ಬಂದಿದೆ. ಹಾಗಾಗಿ ಇದೇ ದಿನ ಈ ಮಂಗಳಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಎಂಒ ತಿಳಿಸಿದೆ.
ಭಗವಾಧ್ವಜದ ವಿಶೇಷತೆ:
ಶಿಖರದ ಮೇಲೆ ಸ್ಥಾಪಿಸಲಾದ 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದರ ಮೇಲೆ ಸೂರ್ಯ, ‘ಓಂ’ ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ. ಸೂರ್ಯನ ಚಿತ್ರ ರಾಮನ ವಂಶವಾದ ಸೂರ್ಯವಂಶವನ್ನು ಸೂಚಿಸುತ್ತದೆ. ‘ಓಂ’ ಶುಭಸೂಚಕವಾಗಿದ್ದು, ಕೋವಿದಾರ ಮರವು ಅಯೋಧ್ಯೆಯ ಪ್ರಾಚೀನ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ.
ವಿವಿಧ ದೇಗುಲಗಳಿಗೆ ಭೇಟಿ:
ಅಯೋಧ್ಯೆ ಭೇಟಿ ವೇಳೆ ಪ್ರಧಾನಿ ಮೋದಿಯವರು ಶೇಷಾವತಾರ ಮಂದಿರ, ಸಪ್ತಮಂದಿರ, ಮಾತಾ ಅನ್ನಪೂರ್ಣ ಮಂದಿರಗಳಿಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಬಾಲರಾಮನ ದರ್ಶನ ಪಡೆದ ಬಳಿಕ ರಾಮದರ್ಬಾರ್‌ನಲ್ಲಿ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ಧ್ವಜಾರೋಹಣ ನೆರವೇರಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ, ದಶಕಗಳ ಕಾನೂನು ಹೋರಾಟದ ಬಳಿಕ 2019ರ ನ.9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ವಿವಾದಿತ 2.77 ಎಕರೆ ಜಮೀನು ಶ್ರೀರಾಮನಿಗೆ ಸೇರಿದೆ ಎಂದು ಘೋಷಿಸಿ, ಅಲ್ಲೇ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತು. ಮಸೀದಿಗಾಗಿ ಅಯೋಧ್ಯೆಯಲ್ಲೇ ಬೇರೆಡೆ 5 ಎಕರೆ ಜಾಗವನ್ನು ಸರ್ಕಾರ ಕೊಡಬೇಕೆಂದು ಆದೇಶಿಸಿತು. 2020ರ ಆ. 5ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ ರಾಮಮಂದಿರದ ಶಿಲಾನ್ಯಾಸ ಮಾಡಿದರು. 2024ರ ಜ.22ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಿತು. ಈಗ ಇಡೀ ಮಂದಿರದ ಕಾಮಗಾರಿ ಪೂರ್ಣಗೊಂಡಂತಾಗಿದೆ.
- ದೇಗುಲದ ಶಿಖರದ ಮೇಲೆ ಬೃಹತ್ ಭಗವಾಧ್ವಜ ಹಾರಾಟ
- ಧ್ವಜಾರೋಹಣ ಬಳಿಕ ಜನರನ್ನುದ್ದೇಶಿಸಿ ಪ್ರಧಾನಿ ಮಾತು
- 360 ಡಿಗ್ರಿಯೂ ತಿರುಗಬಲ್ಲ 42 ಅಡಿ ಎತ್ತರದ ಧ್ವಜಸ್ತಂಭ
- ಧ್ವಜದ ಮೇಲೆ ಸೂರ್ಯ, ಓಂ, ಕೋವಿದಾರ ಮರದ ಚಿತ್ರ
- ಅಯೋಧ್ಯೆ ರಾಮಮಂದಿರ ನಿರ್ಮಾಣ ಪ್ರಕ್ರಿಯೆ ಸಂಪೂರ್ಣ
)
)
;Resize=(128,128))
;Resize=(128,128))