ದಾಖಲೆಯ 1 ಲಕ್ಷ ಜನಕ್ಕೆ ಪ್ರಧಾನಿ ಮೋದಿ ಇಂದು ನೇಮಕಾತಿ ಪತ್ರ

| Published : Feb 12 2024, 01:39 AM IST / Updated: Feb 12 2024, 07:39 AM IST

Narendra Modi

ಸಾರಾಂಶ

ಏಕಕಾಲಕ್ಕೆ ದೇಶಾದ್ಯಂತ 47 ಸ್ಥಳಗಳಲ್ಲಿ ನೌಕರಿ ಪತ್ರ ವಿತರಣೆ ಮಾಡಲಿದ್ದು, ಒಂದೂವರೆ ವರ್ಷದಲ್ಲಿ 8 ಲಕ್ಷ ಉದ್ಯೋಗ ನೀಡಿದ ಸರ್ಕಾರ ತನ್ನ ಗುರಿ ತಲುಪುವ ವಿಶ್ವಾಸದಲ್ಲಿದೆ.

ನವದೆಹಲಿ: ರೋಜ್‌ಗಾರ್‌ ಮೇಳ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ದೇಶದ 1 ಲಕ್ಷ ಜನರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಣೆಗೆ ಸೋಮವಾರ ಚಾಲನೆ ನೀಡಲಿದ್ದಾರೆ.

1 ಲಕ್ಷ ನೇಮಕ ಪತ್ರ ವಿತರಣೆ ಈವರೆಗಿನ ಅತಿ ಗರಿಷ್ಠವಾಗಿದೆ. ಈ ಹಿಂದೆ ಸುಮಾರು 70 ಸಾವಿರ ಜನರಿಗೆ ನೇಮಕ ಪತ್ರ ನೀಡಲಾಗಿತ್ತು. 

ಇದರೊಂದಿಗೆ ಸೋಮವಾರ ನೀಡಲಾಗುವ 1 ಲಕ್ಷ ನೇಮಕ ಪತ್ರವೂ ಸೇರಿದಂತೆ ಅಕ್ಟೋಬರ್‌ 2022ರ ಬಳಿಕ ಒಟ್ಟು 8 ರೋಜ್‌ಗಾರ್‌ ಮೇಳಗಳಲ್ಲಿ ಒಟ್ಟು 8 ಲಕ್ಷ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. 

2024ರ ಅಂತ್ಯದೊಳಗೆ 10 ಲಕ್ಷ ನೇಮಕ ನಡೆಸುವ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿದೆ.

ಸೋಮವಾರ ಬೆಳಗ್ಗೆ 10:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಲಿದ್ದಾರೆ. 

ಇದೇ ವೇಳೆ ಏಕಕಾಲಕ್ಕೆ ದೇಶದ 47 ಸ್ಥಳಗಳಲ್ಲಿ ನೇಮಕ ಪತ್ರ ವಿತರಣೆ ಕಾರ್ಯಕ್ರಮ ಆಯೋಜನೆಗೊಂಡಿವೆ.

ಕಂದಾಯ, ಗೃಹ, ಅಣುಶಕ್ತಿ, ಉನ್ನತ ಶಿಕ್ಷಣ, ಹಣಕಾಸು, ರಕ್ಷಣೆ, ರೈಲ್ವೆ ಮುಂತಾದ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ಪಡೆದವರಿಗೆ ಈ ಸಲ ನೇಮಕ ಪತ್ರ ನೀಡಲಾಗುತ್ತದೆ.