ಸಾರಾಂಶ
ನವದೆಹಲಿ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ನೀಡಲಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.
ಈ ಕುರಿತು ಪ್ರಧಾನಿಯವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಫೆ.5ರಂದು ಪ್ರಧಾನಿ ಮೋದಿ ಸಂಗಮದಲ್ಲಿ ಮಿಂದೆದ್ದು ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಭಾರತದ ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ ಉತ್ತೇಜಿಸುವ ಭಾಗವಾಗಿ ಅವರು ಮೂಲಸೌಕರ್ಯ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ’ ಎಂದು ತಿಳಿಸಲಾಗಿದೆ.ಜ.13ರ ಪೌಶ್ ಪೌರ್ಣಮಿಯಂದು ಆರಂಭವಾದ ಕುಂಭಮೇಳವು ಫೆ.26ರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ.
==ಕುಂಭದಲ್ಲಿ ಭೂತಾನ್ ದೊರೆ ಪುಣ್ಯಸ್ನಾನ
ಪ್ರಯಾಗರಾಜ್: ಭೂತಾನ್ ದೇಶದ ರಾಜ ಜಿಗ್ಮೆ ಖೇಸರ್ ನಾಮಗ್ಯಲ್ ವಾಂಗ್ಚುಕ್ ಅವರು ಮಂಗಳವಾರ ಇಲ್ಲಿನ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಈ ವೇಳೆ ಖೇಸರ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಾಗತಿಸಿ, ಕುಂಭಮೇಳದಲ್ಲಿ ಇಬ್ಬರು ಜೊತೆಯಾಗಿ ಸ್ನಾನ ಮಾಡಿದರು. ಉತ್ತರ ಪ್ರದೇಶದ ಸಂಪುಟ ಸಚಿವರು ಸಹ ಭುತಾನ್ ಅರಸರಿಗೆ ಸಾಥ್ ನೀಡಿದರು. ಸ್ನಾನದ ಬಳಿಕ ಲಖನೌಗೆ ತೆರಳಿದ ಅವರು, ರಾಜ್ಯಪಾಲೆ ಆನಂದಿಬೇನ್ ಅವರನ್ನು ಭೇಟಿಯಾದರು. ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.