ಸಾರಾಂಶ
ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪ್ರಸಿದ್ಧ ‘ಕಾಲಾರಾಮ್’ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ನೆಲ ಒರೆಸುವ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿದ್ದಾರೆ. ಈ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ದೇವಸ್ಥಾನಗಳಲ್ಲಿ ‘ಸ್ವಚ್ಛತಾ ಅಭಿಯಾನ’ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ನಾಸಿಕ್‌ನ ಕಾಲಾರಾಮ್ ದೇವಸ್ಥಾನಕ್ಕೆ ಆಗಮಿಸಿದ್ದ ಮೋದಿ, ಅಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಬಳಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು ರಾಮಾಯಣ ಶ್ಲೋಕ ಪಠಣ ಮತ್ತು ಭಜನೆಯಲ್ಲಿ ಭಾಗಿಯಾಗಿದರು. ಸಂತ ಏಕ್‌ನಾಥ್ ಅವರು ಮರಾಠಿಯಲ್ಲಿ ಬರೆದ ‘ಭಾವಾರ್ಥ ರಾಮಾಯಣ’ವನ್ನು ಪಂಡಿತರು ಪಠಣ ಮಾಡಿದರು. ಈ ವೇಳೆ ಕೈಯಲ್ಲಿ ತಾಳ ಹಿಡಿದು ಬಾರಿಸುತ್ತ ಮೋದಿ ಕೂಡ ಭಜನೆಯಲ್ಲಿ ತೊಡಗಿದರು. ಬಳಿಕ ನಾಸಿಕ್‌ನ ತಪೋವನ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಇದಕ್ಕೂ ಮುನ್ನ ದೇಶದ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಿ ಎಂದು ನಾನು ದೇಶದ ಜನರಲ್ಲಿ ಮನವಿ ಮಾಡುತ್ತೇನೆ’ ಎಂದರು.