ಕಾಂಗ್ರೆಸ್‌ನಿಂದ ದೇಶ ಒಡೆವ ತಂತ್ರ: ಮೋದಿ ವಾಗ್ದಾಳಿ

| Published : Apr 24 2024, 02:21 AM IST

ಸಾರಾಂಶ

‘ಗೋವಾ ರಾಜ್ಯದ ಮೇಲೆ ಸಂವಿಧಾನವನ್ನು ಹೇರಲಾಗಿದೆ’ ಎಂಬ ದಕ್ಷಿಣ ಗೋವಾ ಕಾಂಗ್ರೆಸ್‌ ಅಭ್ಯರ್ಥಿ ವಿರಿಯಾಟೋ ಫರ್ನಾಂಡಿಸ್‌ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ದೇಶವನ್ನು ಒಡೆಯುವ ತಂತ್ರ’ ಎಂದು ಕಿಡಿಕಾರಿದ್ದಾರೆ.

ಪಿಟಿಐ ಸಕ್ತಿ (ಛತ್ತೀಸ್‌ಗಢ)

‘ಗೋವಾ ರಾಜ್ಯದ ಮೇಲೆ ಸಂವಿಧಾನವನ್ನು ಹೇರಲಾಗಿದೆ’ ಎಂಬ ದಕ್ಷಿಣ ಗೋವಾ ಕಾಂಗ್ರೆಸ್‌ ಅಭ್ಯರ್ಥಿ ವಿರಿಯಾಟೋ ಫರ್ನಾಂಡಿಸ್‌ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ದೇಶವನ್ನು ಒಡೆಯುವ ತಂತ್ರ’ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಈ ಹಿಂದೆ ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಮಾಡುವ ಕುರಿತು ಮಾತನಾಡಿದ್ದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಹೇಳಿಕೆಯನ್ನೂ ಪುನಃ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಛತ್ತೀಸ್‌ಗಢದ ಶಕ್ತಿ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ''''''''ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕಾಂಗ್ರೆಸ್ ಸ್ವಾತಂತ್ರ್ಯದ ಮೊದಲ ದಿನದಿಂದಲೂ ತುಷ್ಟೀಕರಣದಲ್ಲಿ ತೊಡಗಿದೆ. ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರು ಅಧಿಕಾರದಲ್ಲಿ ಪಾಲ್ಗೊಳ್ಳುವುದನ್ನು ಕಾಂಗ್ರೆಸ್ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ಪಕ್ಷವು ದೊಡ್ಡ ಆಟವನ್ನು ಪ್ರಾರಂಭಿಸಿದೆ. ಈ ಹಿಂದೆ ಕರ್ನಾಟಕದ ಕಾಂಗ್ರೆಸ್ ಸಂಸದರೊಬ್ಬರು (ಡಿ.ಕೆ. ಸುರೇಶ್) ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಎಂದು ಘೋಷಿಸಬೇಕು ಎಂದು ಹೇಳಿದರು. ಈಗ ಗೋವಾದಿಂದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು (ಫರ್ನಾಂಡಿಸ್‌) ಗೋವಾಗೆ ಭಾರತೀಯ ಸಂವಿಧಾನವು ಅನ್ವಯಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಗೋವಾದಲ್ಲಿ ಸಂವಿಧಾನವನ್ನು ಬಲವಂತವಾಗಿ ಹೇರಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಲ್ಲವೇ? ಇದು ಸಂವಿಧಾನಕ್ಕೆ ಮಾಡಿದ ಅವಮಾನವಲ್ಲವೇ? ಇದು ಭಾರತದ ಸಂವಿಧಾನದ ತಿರುಚುವಿಕೆ ಅಲ್ಲವೇ? ಇಂದು ಗೋವಾದಲ್ಲಿ ಕಾಂಗ್ರೆಸ್ ಸಂವಿಧಾನವನ್ನು ತಿರಸ್ಕರಿಸುತ್ತಿದೆ. ನಾಳೆ ಇಡೀ ದೇಶದಲ್ಲಿ ಅದೇ ರೀತಿ ಮಾಡಲಿ’ ಎಂದು ಪ್ರಧಾನಿ ಎಚ್ಚರಿಸಿದರು.‘ಕಾಂಗ್ರೆಸ್ ಅಭ್ಯರ್ಥಿ ಈ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ್ದಾರೆ ಎಂದರೆ ಅವರಿಗೆ ಅವರ ನಾಯಕನ ಬೆಂಬಲವಿದೆ ಎಂದು ಅರ್ಥ. ಇದು ದೇಶವನ್ನು ಒಡೆಯುವ ತಂತ್ರವಾಗಿದೆ. ದೇಶದ ಬಹುಪಾಲು ಭಾಗವು ಕಾಂಗ್ರೆಸ್ ಅನ್ನು ತಿರಸ್ಕರಿಸಿದೆ’ ಎಂದು ಮೋದಿ ಪರೋಕ್ಷವಾಗಿ ರಾಹುಲ್‌ ಗಾಂಧಿಗೆ ಚಾಟಿ ಬೀಸಿದರು.ಫರ್ನಾಂಡಿಸ್‌ ಹೇಳಿದ್ದೇನು?:

ದಕ್ಷಿಣ ಗೋವಾದ ಕಾಂಗ್ರೆಸ್ ಅಭ್ಯರ್ಥಿ ವಿರಿಯಾಟೊ ಫೆರ್ನಾಂಡಿಸ್‌ ಸೋಮವಾರ ಮಾತನಾಡಿ, ‘ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಂಡ ನಂತರ ಗೋವಾ ತನ್ನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹೇಳಿದ್ದರು. ಆದರೆ ಇದು ಸಾಕಾರಗೊಳ್ಳಲಿಲ್ಲ. ಅದರ ಬದಲಾಗಿ ಭಾರತೀಯ ಸಂವಿಧಾನವನ್ನು ರಾಜ್ಯದ ಮೇಲೆ ಬಲವಂತವಾಗಿ ಹೇರಲಾಯಿತು’ ಎಂದಿದ್ದರು.