- ನದಿಯಲ್ಲಿ ಸಂಚರಿಸುತ್ತ ಫೋಟೋಗ್ರಫಿ!

ಪಿಟಿಐ ಕೋಲ್ಕತಾ

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ಭರಾಟೆ ನಡುವೆ ಇತ್ತೀಚೆಗೆ ರಸ್ತೆ ಪಕ್ಕದ ಅಂಗಡಿಗೆ ಹೋಗಿ ಚುರುಮುರಿ ತಿಂದು ಸುದ್ದಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಗಂಗಾ ನದಿಯ ಕವಲು ನದಿಯಾದ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿ ಗಮನ ಸೆಳೆದರು.ಏ.29ರಂದು ನಡೆಯಲಿರುವ 2ನೇ ಹಂತದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಮೋದಿ ದೋಣಿ ವಿಹಾರ ನಡೆಸಿರುವ ಕೆಲವು ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕೈಯಲ್ಲಿ ಕ್ಯಾಮೆರಾ ಹಿಡಿದು ಮರದ ದೋಣಿಯ ಮೇಲೆ ಪ್ರಧಾನಿ ಕುಳಿತಿರುವುದು ಹಾಗೂ ಮತ್ತೊಂದು ಬದಿಯಲ್ಲಿ ಪ್ರಸಿದ್ಧ ಹೌರಾ ಸೇತುವೆ ಮತ್ತು ವಿದ್ಯಾಸಾಗರ್‌ ಸೇತು ಕಾಣಬಹುದು.

‘ಪ್ರತಿಯೊಬ್ಬ ಬಂಗಾಳಿಗೂ ಗಂಗಾ ನದಿಯು ಬಹಳ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಗಂಗಾ ನದಿಯು ಬಂಗಾಳದ ಆತ್ಮದ ಮೂಲಕ ಹರಿಯುತ್ತದೆ ಎಂದು ಹೇಳಬಹುದು. ಅದರ ದೈವಿಕ ನೀರು ಇಡೀ ನಾಗರಿಕತೆಯ ಕಾಲತೀತ ಚೈತನ್ಯವನ್ನು ಹೊತ್ತೊಯ್ಯುತ್ತದೆ’ ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮಮತಾ ವ್ಯಂಗ್ಯ:


ಯಮುನೆಯಂತೆ ಹೂಗ್ಲಿ ಅಶುಚಿ ಆಗಿಲ್ಲ. ಹೀಗಾಗೇ ಮೋದಿ ದೋಣಿವಿಹಾರ ಮಾಡಲು ಸಾಧ್ಯವಾಯಿತು ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ. ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಮಾತನಾಡಿ, ‘ಮೋದಿ ಅವರು ಬಂಗಾಳ ಟೂರಿಸಂನ ಉತ್ತಮ ಪ್ರಚಾರಕರಾಗಿದ್ದಾರೆ’ ಎಂದು ತಿವಿದಿದ್ದಾರೆ.