ಪ್ರಧಾನಿ ನರೇಂದ್ರ ಮೋದಿ ಜು.2ರಿಂದ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯ ವೇಳೆಯಲ್ಲೇ ಅವರು ಬ್ರೆಜಿಲ್‌ನಲ್ಲಿ ನಡೆಯುವ ಬ್ರಿಕ್ಸ್‌ ದೇಶಗಳ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜು.2ರಿಂದ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯ ವೇಳೆಯಲ್ಲೇ ಅವರು ಬ್ರೆಜಿಲ್‌ನಲ್ಲಿ ನಡೆಯುವ ಬ್ರಿಕ್ಸ್‌ ದೇಶಗಳ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದಾರೆ.

ಜು.2ರಂದು ಆರಂಭವಾಗಲಿರುವ ಪ್ರವಾಸದಲ್ಲಿ ಮೋದಿ ಅವರು ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೋ, ಅರ್ಜೆಂಟೀನಾ, ಘಾನಾ ಮತ್ತು ನಮೀಬಿಯಾಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಜು.6-7ರಂದು ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆವ ಬ್ರಿಕ್ಸ್‌ ಶೃಂಗದಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಷೇರು ಬ್ರೋಕರೇಜ್ ವ್ಯವಹಾರಕ್ಕೆ ರಿಲಯನ್ಸ್‌ ಜಿಯೋ ಪ್ರವೇಶ

ಮುಂಬೈ: ಜಿಯೋ ಹಾಗೂ ಅಮೆರಿಕದ ಖ್ಯಾತ ಹೂಡಿಕೆ ಸಂಸ್ಥೆ ಬ್ಲ್ಯಾಕ್‌ರಾಕ್ ಜಂಟಿಯಾಗಿ ಪ್ರಾರಂಭಿಸಿರುವ ಜಿಯೋ ಬ್ಲ್ಯಾಕ್‌ರಾಕ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ಬ್ರೋಕರೇಜ್ ಸಂಸ್ಥೆಯಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ಸೆಬಿ ಅನುಮೋದನೆ ನೀಡಿದೆ. ಇದು ಭಾರತೀಯ ಹೂಡಿಕೆದಾರರು ಡಿಜಿಟಲ್ ವೇದಿಕೆ ಮೂಲಕ ಸರಾಗವಾಗಿ ವ್ಯಾಪಾರ ಮತ್ತು ಹೂಡಿಕೆ ಮಾಡಲು ಅನುವು ಮಾಡಿಕೊಡಲಿದೆ ಎಂದು ರಿಲಯನ್ಸ್‌ ಹೇಳಿದೆ.

ಮಧ್ಯಪ್ರದೇಶ ಸಿಎಂರ 19 ಬೆಂಗಾವಲು ವಾಹನಗಳಿಗೆ ಬಂಕಲ್ಲಿ ಕಲಬೆರಕೆ ಡೀಸೆಲ್‌

ರತ್ಲಾಂ (ಮಧ್ಯಪ್ರದೇಶ): ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರ 19 ಬೆಂಗಾವಲು ವಾಹನಗಳಿಗೆ ಸ್ಥಳೀಯ ಪೆಟ್ರೋಲ್‌ ಬಂಕ್‌ ಒಂದರಲ್ಲಿ ಕಲಬೆರಕೆ ಡೀಸೆಲ್‌ ತುಂಬಿಸಿದ ಘಟನೆ ಗುರುವಾರ ನಡೆದಿದೆ. ಹೀಗಾಗಿ ಶುಕ್ರವಾರ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮಕ್ಕೆ ಈ ವಾಹನಗಳು ತೆರಳಲು ವಿಫಲವಾಗಿದೆ.

 ಶುಕ್ರವಾರ ರತ್ಲಾಂನಲ್ಲಿ ಏರ್ಪಟ್ಟಿದ್ದ ಕಾರ್ಯಕ್ರಮಕ್ಕೆ ಈ ವಾಹನಗಳು ತೆರಳಬೇಕಿತ್ತು. ಹೀಗಾಗಿ ಅವುಗಳಿಗೆ ಹಿಂದಿನ ದಿನ ರಾತ್ರಿಯೇ ಶಕ್ತಿ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿದ್ದಾರೆ. ಆದರೆ ಇಂಧನ ತುಂಬಿಸಿ ತೆರಳುವ ಕೆಲವೇ ಹೊತ್ತಿನಲ್ಲಿ ಎಲ್ಲಾ ಕಾರುಗಳು ಕೆಟ್ಟುಹೋಗಿವೆ. ಹೀಗಾಗಿ ಇಂಧನದಲ್ಲಿ ನೀರು ಬೆರೆತಿರುವ ಶಂಕೆಯನ್ನು ಚಾಲಕರು ವ್ಯಕ್ತಪಡಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ, ಜಿಲ್ಲಾಧಿಕಾರಿ ಶಾಲಿನಿ ಶ್ರೀವಸ್ತವ ಅವರು ಪೆಟ್ರೋಲ್‌ ಪಂಪ್‌ ಬಂದ್‌ ಮಾಡಿಸಿದ್ದಾರೆ.

ತಾಜಮಹಲ್‌ ಗೋಪುರ ಬಳಿ ನೀರು ಸೋರುವಿಕೆ ಪತ್ತೆ: ದುರಸ್ತಿ ಕೆಲ್ಸ ಶುರು

ಲಖನೌ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್‌ ಮಹಲ್‌ನ ಗುಮ್ಮಟ ಸೋರುತ್ತಿರುವ ಸಂಗತಿಯು ಪುರಾತತ್ವ ಇಲಾಖೆಯ ಸಮೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಪುರಾತತ್ವ ಇಲಾಖೆಯು ಗುಮ್ಮಟದ ಥರ್ಮಲ್‌ ಸ್ಕ್ಯಾನಿಂಗ್‌ ಮಾಡುವಾಗಿ ಸೋರಿಕೆಯು ಗೊತ್ತಾಗಿದೆ. ಗುಮ್ಮಟದ ಇಟ್ಟಿಗೆಗಳ ಮಧ್ಯೆ ಗಾರೆ ಸವೆತ, ಗುಮ್ಮಟದ ಮುಖ್ಯದ್ವಾರದ ಬಾಗಿಲು ಶಿಥಿಲಾವಸ್ಥೆಗೆ ಹೋಗಿರುವುದು, ನೆಲ ಸವೆದಿರುವುದು ಹಾಗೂ ಗುಮ್ಮಟದ ತುದಿಯಲ್ಲಿರುವ ಕಬ್ಬಿಣವೂ ಸಹ ತುಕ್ಕು ಹಿಡಿದಿರುವುದು ತಿಳಿದುಬಂದಿದೆ. ಇದಕ್ಕಾಗಿ ಎಎಸ್‌ಐ ಈಗಾಗಲೇ ಕಾಮಗಾರಿ ಆರಂಭಿಸಿದ್ದು, ಮುಕ್ತಾಯಕ್ಕೆ 6 ತಿಂಗಳು ಹಿಡಿಯಲಿದೆ ಎಂದು ಮೂಲಗಳು ತಿಳಿಸಿದೆ.

ಜಗನ್ನಾಥ ರಥಯಾತ್ರೆ ವೇಳೆ ಜನರ ನಡುವೆ ನುಗ್ಗಿ ಆನೆ ರಂಪಾಟ

ಅಹಮದಾಬಾದ್: ಶುಕ್ರವಾರ ಅಹಮದಾಬಾದ್‌ನ ಜಗನ್ನಾಥ ದೇಗುಲದ ರಥಯಾತ್ರೆ ವೇಳೆ ಕೆರಳಿದ ಆನೆಯೊಂದು ರಸ್ತೆಗೆ ನುಗ್ಗಿದ್ದರಿಂದ ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ನಡೆದಿದೆ. ‘ರಥಯಾತ್ರೆ ನಡೆಯುತ್ತಿದ್ದ ವೇಳೆ ಖಾಡಿಯಾ ಪ್ರದೇಶದಲ್ಲಿ ಕೆರಳಿದ ಗಂಡು ಆನೆಯೊಂದು ಬ್ಯಾರಿಕೇಡ್ ಮುರಿದು ಇಕ್ಕಟ್ಟಾದ ರಸ್ತೆಗೆ ನುಗ್ಗಿದೆ. ಆಗ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಉಳಿದೆರಡು ಆನೆಗಳ ಮೇಲಿದ್ದ ಮಾವುತರು ಕೆರಳಿದ ಆನೆಯನ್ನು ಹಿಂಬಾಲಿಸಿ, ಅದನ್ನು ನಿಯಂತ್ರಿಸಿದ್ದಾರೆ. ಆ ಬಳಿಕ ರಥಯಾತ್ರೆ ನಿಗದಿತ ಮಾರ್ಗದಲ್ಲಿ ಸುಗಮವಾಗಿ ಮುಂದುವರಿದಿದೆ’ ಎಂದು ಉಪ ಪೊಲೀಸ್ ಆಯುಕ್ತರು ಕೋಮಲ್ ವ್ಯಾಸ್ ತಿಳಿಸಿದ್ದಾರೆ.

ಡೆಮಾಕ್ರಟ್‌ ಮಮ್ದಾನಿ ಬಗ್ಗೆ ಕನ್ನಡಿಗರಿಗೆ ಭಾರೀ ಆಸಕ್ತಿ; ಹುಡುಕಾಟದಲ್ಲಿ ನಂ.2

ನವದೆಹಲಿ: ನ್ಯೂಯಾರ್ಕ್‌ ನಗರದ ಮೇಯರ್‌ ಹುದ್ದೆಗೆ ಡೆಮಾಕ್ರೆಟ್‌ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಭಾರತ ಮೂಲದ, ಆದರೂ ಭಾರತ ವಿರೋಧಿ ಮನಃಸ್ಥಿತಿಯ ಝೊಹರ್‌ ಮಮ್ದಾನಿ ಬಗ್ಗೆ ಕನ್ನಡಿಗರು ಭಾರೀ ಆಸಕ್ತಿವಹಿಸಿದ್ದು ಕಂಡುಬಂದಿದೆ. 

ಮಮ್ವಾನಿ ಆಯ್ಕೆಯಾದ ಬೆನ್ನಲ್ಲೇ ಆತನ ಕುರಿತು ಜಾಲತಾಣದಲ್ಲಿ ಭಾರೀ ಹುಡುಕಾಟ ನಡೆದಿದೆ. ಹೀಗೆ ಅತಿ ಹೆಚ್ಚು ಹುಡುಕಾಟ ನಡೆಸಿದ ರಾಜ್ಯಗಳ ಪೈಕಿ ಜಮ್ಮು ಕಾಶ್ಮೀರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. ಗೋವಾ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ, ಹರ್ಯಾಣ ನಂತರದ ಸ್ಥಾನಗಳಲ್ಲಿವೆ. ಪಾಕ್‌ ಪರವೆಂದು ಗುರುತಿಸಿಕೊಂಡಿರುವ ಮಮ್ದಾನಿ, ಭಾರತ ವಿರೋಧಿ ಧೋರಣೆಗಳಿಂದಲೇ ದೇಶದಲ್ಲಿ ಸುದ್ದಿಯಾಗಿದ್ದಾರೆ.