ಸಾರಾಂಶ
ಸರ್ಕಾರಿ ಒಡೆತನದ ದೂರಸಂಪರ್ಕ ಕಂಪನಿಯಾಗಿರುವ ಬಿಎಸ್‌ಎನ್‌ಎಲ್‌ನ ಸ್ವದೇಶಿ 4 ಜಿ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಒಡಿಶಾದ ಝಾರ್ಸುಗುಂಡಾದಲ್ಲಿ ಉದ್ಘಾಟಿಸಲಿದ್ದಾರೆ.
- ಒಡಿಶಾದಲ್ಲಿ ಮೋದಿ ಲೋಕಾರ್ಪಣೆ- 97500 ಸ್ವದೇಶಿ 4ಜಿ ಟವರ್ ಸ್ಥಾಪನೆ । 5ಜಿಗೂ ಏರಿಸಬಹುದು- ಸ್ವಂತ ಟೆಲಿಕಾಂ ಉಪಕರಣ ಉತ್ಪಾದಿಸುವ 5ನೇ ದೇಶ
ಪಿಟಿಐ ನವದೆಹಲಿಸರ್ಕಾರಿ ಒಡೆತನದ ದೂರಸಂಪರ್ಕ ಕಂಪನಿಯಾಗಿರುವ ಬಿಎಸ್‌ಎನ್‌ಎಲ್‌ನ ಸ್ವದೇಶಿ 4 ಜಿ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಒಡಿಶಾದ ಝಾರ್ಸುಗುಂಡಾದಲ್ಲಿ ಉದ್ಘಾಟಿಸಲಿದ್ದಾರೆ.
ಇದರಿಂದ, ಭಾರತವು ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ, ಚೀನಾಗಳಂತೆ ತನ್ನ ಸ್ವಂತ ದೂರಸಂಪರ್ಕ ಉಪಕರಣಗಳನ್ನು ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.ಈ ಬಗ್ಗೆ ಮಾಹಿತಿ ನೀಡಿರುವ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಇದು ಟೆಲಿಕಾಂ ವಲಯದ ಹೊಸ ಯುಗವಾಗಿದೆ. ಶನಿವಾರ ಮೋದಿಯವರು 97,500ಕ್ಕೂ ಅಧಿಕ ಸ್ವದೇಶಿ 4ಜಿ ಮೊಬೈಲ್ ಟವರ್‌ಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇವುಗಳಲ್ಲಿ 92,600 ಟವರ್‌ಗಳನ್ನು 5ಜಿ ದರ್ಜೆಗೆ ಏರಿಸಬಹುದಾಗಿದೆ. ಇದನ್ನು ತೇಜಸ್ ನೆಟ್‌ವರ್ಕ್ಸ್ ಅಭಿವೃದ್ಧಿಪಡಿಸಿದೆ ಹಾಗೂ ಟಿಸಿಎಸ್ ಸಂಯೋಜಿಸಿದೆ’ ಎಂದಿದ್ದಾರೆ.
ಜತೆಗೆ, ‘ಈ ಯೋಜನೆಯಿಂದ ಭಾರತ, ಸ್ವಂತ ದೂರಸಂಪರ್ಕ ಉಪಕರಣಗಳನ್ನು ತಯಾರಿಸುವ 5ನೇ ದೇಶವಾಗಲಿದೆ’ ಎಂದು ಹೇಳಿದ್ದಾರೆ.ಅತ್ತ ಡಿಜಿಟಲ್ ಭಾರತ್ ನಿಧಿಯ ಹಣಕಾಸು ನೆರವಿನ ಅಡಿ ರಿಲಯನ್ಸ್ ಜಿಯೋ ಇನ್ಫೋಕಾಂ 14,180 ‘4-ಜಿ ಟವರ್’ಗಳನ್ನು ಮತ್ತು ಭಾರ್ತಿ ಏರ್‌ಟೆಲ್ 4,700 ‘4-ಜಿ ಟವರ್’ಗಳನ್ನು ಹಾಕಿವೆ. ಇವು ಗ್ರಾಮೀಣ, ಗಡಿಯಲ್ಲಿರುವ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಿಗೆ ಸಂಪರ್ಕ ಒದಗಿಸುತ್ತವೆ. ಇದರಿಂದ 2 ಲಕ್ಷ ಮಂದಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ಹೇಳಿವೆ.