ಪ್ರಧಾನಿ ಮೋದಿ ವಂದೇ ಮಾತರಂ ಗೀತೆಗೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ. ಇತಿಹಾಸವನ್ನು ಪುನಃ ಬರೆಯಲು ಬಯಸಿದ್ದಾರೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಜತೆಗೆ, ಮಾತಾಡುವಾಗೆಲ್ಲಾ ನೆಹರು ಅವರ ಹೆಸರೆತ್ತುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭ್ಯಾಸವಾಗಿಹೋಗಿದೆ’ ಎಂದೂ ಆಪಾದಿಸಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಮಾತರಂ ಗೀತೆಗೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ. ಜತೆಗೆ, ಇತಿಹಾಸವನ್ನು ಪುನಃ ಬರೆಯಲು ಬಯಸಿದ್ದಾರೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಜತೆಗೆ, ಮಾತಾಡುವಾಗೆಲ್ಲಾ ನೆಹರು ಅವರ ಹೆಸರೆತ್ತುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭ್ಯಾಸವಾಗಿಹೋಗಿದೆ’ ಎಂದೂ ಆಪಾದಿಸಿದೆ.
ವಂದೇ ಮಾತರಂ ಬಗೆಗಿನ ಚರ್ಚೆ ವೇಳೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್ ಗೊಗೋಯ್, ‘ವಂದೇ ಮಾತರಂಗೆ ಅದರ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನ ಕೊಟ್ಟದ್ದು ಕಾಂಗ್ರೆಸ್. ಆದರೆ ಇಂದು ಪ್ರಧಾನಿಯವರ ಭಾಷಣದಲ್ಲಿ ಇತಿಹಾಸವನ್ನು ಪುನಃ ತಿದ್ದಿ ಬರೆಯುವ ಇಚ್ಛೆ ಕಾಣಿಸುತ್ತಿದೆ. ಅವರ ಇನ್ನೊಂದು ಉದ್ದೇಶ, ಚರ್ಚೆಗೆ ರಾಜಕೀಯ ಬಣ್ಣ ಬಳಿಯುವುದು ಆಗಿತ್ತು’ ಎಂದರು. ಜತೆಗೆ, ‘ನಿಮ್ಮ (ಬಿಜೆಪಿಯವರ) ಪೂರ್ವಜರು ಬ್ರಿಟಿಷ್ ಆಡಳಿತವನ್ನು ಯಾವಾಗ ವಿರೋಧಿಸಿದರು? ಭಾರತ ಬಿಟ್ಟು ತೊಲಗಿ ಚಳವಳಿ ವೇಳೆ ಎಲ್ಲಿದ್ದರು?’ ಎಂದು ಪ್ರಶ್ನಿಸಿದ್ದಾರೆ.
ಮೋದಿಯಿಂದ ನೆಹರು ಜಪ: ‘
ಮೋದಿಯವರು ಆಪರೇಷನ್ ಸಿಂದೂರದ ಬಗೆಗಿನ ಚರ್ಚೆ ವೇಳೆ 14 ಬಾರಿ ನೆಹರು ಹೆಸರು ಮತ್ತು 50 ಬಾರಿ ಕಾಂಗ್ರೆಸ್ ಹೆಸರು ಹೇಳಿದರು. ಇದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಆದರೆ ನೀವೆಷ್ಟೇ ಪ್ರಯತ್ನ ಮಾಡಿದರೂ ನೆಹರು ಹೆಸರಿಗೆ ಕಳಂತ ತರುವ ಯತ್ನ ಫಲಿಸುವುದಿಲ್ಲ’ ಎಂದ ಗೊಗೋಯ್, ಯಾವ ಸಂದರ್ಭಗಳಲ್ಲಿ ಮೋದಿ ಎಷ್ಟು ಬಾರಿ ಆ ಬಗ್ಗೆ ಉಲ್ಲೇಖಿಸಿದರು ಎಂಬುದರ ಲೆಕ್ಕವನ್ನೂ ಕೊಟ್ಟಿದ್ದಾರೆ.
ವಂದೇ ಮಾತರಂ ಚರ್ಚೆಗೆ ರಾಗಾ ಗೈರು: ಬಿಜೆಪಿ ಕಿಡಿ
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಂದೇ ಮಾತರಂ ಕುರಿತಾದ ಭಾಷಣದ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಗೈರಾಗಿದ್ದಕ್ಕೆ ಬಿಜೆಪಿ ಕಿಡಿಕಾರಿದೆ, ‘ತಪ್ಪಿತಸ್ಥ ಭಾವನೆಯಿಂದ ಕಾಂಗ್ರೆಸ್ಸಿಗರು ಈ ರೀತಿ ಮಾಡಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ‘ಪ್ರಧಾನಿ ನರೇಂದ್ರ ಮೋದಿಯವರು ಭಾಷಣದಲ್ಲಿ ಜವಾಹರಲಾಲ್ ನೆಹರು ಅವರು ಬಿತ್ತಿದ ವಿಭಜನೆಯ ಬೀಜ, ಅಲ್ಪಸಂಖ್ಯಾತರ ಓಲೈಕೆ ದೇಶದ ವಿಭಜನಕ್ಕೆ ಕಾರಣ ಎಂದಿದ್ದರು. ಬಹುಶಃ ಇದೇ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಗೈರಾಗಿರಬಹುದು. ತಮ್ಮ ಕುಟುಂಬವು ವಂದೇ ಮಾತರಂಗೆ ದ್ರೋಹ ಎಸಗಿದ್ದಕ್ಕೆ ಅಪರಾಧಿ ಭಾವನೆಯಿಂದ ಅವರು ಹಾಜರಾಗಲಿಲ್ಲ’ ಎಂದು ಆರೋಪಿಸಿದ್ದಾರೆ.
ಬಂಗಾಳ ಚುನಾವಣೆ ಕಾರಣ ವಂದೇ ಚರ್ಚೆ: ಪ್ರಿಯಾಂಕಾ
ನವದೆಹಲಿ : ‘ಜನರ ಹೃದಯದಲ್ಲಿ ನೆಲೆಸಿರುವ ರಾಷ್ಟ್ರೀಯ ಗೀತೆ ವಂದೇ ಮಾತರಂ ಬಗ್ಗೆ ಚರ್ಚೆ ಅಗತ್ಯವೇನಿತ್ತು? ಎಂದು ಪ್ರಶ್ನಿಸಿರುವ ಸಂಸದೆ ಪ್ರಿಯಾಂಕಾ ಗಾಂಧಿ, ‘ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ಈ ವಿಷಯದ ಚರ್ಚೆಗೆ ಮುಂದಾಗಿದೆ’ ಎಂದು ಆರೋಪಿಸಿದ್ದಾರೆ.ಸೋಮವಾರ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಪ್ರಿಯಾಂಕಾ, ‘ಮೋದಿಯವರ ಆತ್ಮಸ್ಥೈರ್ಯ ಈಗ ಮೊದಲಿನಂತಿಲ್ಲ. ಅವರು ರೂಪಿಸಿರುವ ನಿಯಮಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ಇದರ ಕಡೆ ಜನರ ಗಮನ ಹರಿಯದಂತೆ ಮಾಡಲು, ಅವರು ರಾಷ್ಟ್ರೀಯ ಗೀತೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆ ನೆಪದಲ್ಲಿ ಬಿಜೆಪಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ದೇಶಕ್ಕಾಗಿ ಹೋರಾಡಿದವರ ವಿರುದ್ಧ ಹೊಸ ಆರೋಪಗಳನ್ನು ಮಾಡುತ್ತಿದೆ’ ಎಂದರು.
ಚರ್ಚೆಯೇ ಅನಗತ್ಯ:
‘ವಂದೇ ಮಾತರಂ ನಮ್ಮ ದೇಶದ ಆತ್ಮವಿದ್ದಂತೆ. ಅದರ ಬಗ್ಗೆ ಮಾತನಾಡಿದಾಗ ಸ್ವಾತಂತ್ರ್ಯ ಚಳವಳಿಯ ಇತಿಹಾಸ ನೆನಪಾಗುತ್ತದೆ. ದೇಶವಾಸಿಗಳ ಮನಸ್ಸಲ್ಲಿ ನೆಲೆಸಿರುವ ಗೀತೆಯ ಬಗ್ಗೆ ಚರ್ಚೆ ನಡೆಯುತ್ತಿರುವುದೇ ವಿಚಿತ್ರ. ರಾಷ್ಟ್ರೀಯ ಗೀತೆಯ ಬಗ್ಗೆ ಚರ್ಚೆ ಅಗತ್ಯವೇ?’ ಎಂದಿರುವ ಪ್ರಿಯಾಂಕಾ ಪ್ರಶ್ನಿಸಿದ್ದಾರೆ.ವಂದೇ ಮಾತರಂಅನ್ನು ರಚಿಸಿ ರವೀಂದ್ರನಾಥ್ ಟ್ಯಾಗೋರ್ ಅವರು ಬಂಗಾಳದವರಾಗಿರುವುದರಿಂದ, 2026ರಲ್ಲಿ ಅಲ್ಲಿ ನಡೆಯಲಿರುವ ವಿಧಾನಸಭೆಯಲ್ಲಿ ಬಿಜೆಪಿ ಲಾಭ ಪಡೆಯಲು ಬಯಸಿದೆ ಎಂಬುದು ಅವರ ಇಂಗಿತ.==ನೆಹರು ಬಗ್ಗೆ ಪ್ರತ್ಯೇಕ ಚರ್ಚೆ ಏರ್ಪಡಿಸಿ:ಬಾಬ್ರಿ ಮಸೀದಿ ನಿರ್ಮಾಣಕ್ಕೆ ಯತ್ನ ಸೇರಿದಂರೆ ನೆಹರು ಅವರ ಬಗ್ಗೆ ಬಿಜೆಪಿ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ‘ನೆಹರು ಅವರ ಬಗ್ಗೆ ಚರ್ಚಿಸಲು ಪ್ರತ್ಯೇಕವಾಗಿ ಸಮಯವನ್ನು ಮೀಸಲಿಡಿ. ಅವರ ಬಗ್ಗೆ ಇರುವ ಆರೋಪಗಳನ್ನೆಲ್ಲಾ ಒಂದು ಪಟ್ಟಿ ಮಾಡಿ ತನ್ನಿ. ಆ ಬಗೆಗಿನ ಚರ್ಚೆಯನ್ನು ಮುಗಿಸಿಬಿಡುವ’ ಎಂದು ಹರಿಹಾಯ್ದಿದ್ದಾರೆ.
