ಸಾರಾಂಶ
ಸಾರಣ್: ಬಿಹಾರದ ಸಾರಣ್‌ನಲ್ಲಿ ನಡೆದ ಮೆರವಣಿಗೆಯೊಂದರಲ್ಲಿ ಅಶೋಕ ಚಕ್ರ ಬದಲಿಗೆ ಚಂದ್ರ ಹಾಗೂ ನಕ್ಷತ್ರ ಇರುವ ಭಾರತದ ತ್ರಿವರ್ಣ ಧ್ವಜವನ್ನು ಹೊತ್ತಿದ್ದ ಇಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಹಾಗೂ ಧ್ವಜವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ‘ಈದ್ ಮಿಲಾದ್ ಮೆರವಣಿಗೆಯಲ್ಲಿ ಇಬ್ಬರು ವ್ಯಕ್ತಿಗಳು ಅಶೋಕ ಚಕ್ರ ಬದಲಿಗೆ ಚಂದ್ರ ಹಾಗೂ ನಕ್ಷತ್ರ ಇರುವ ತ್ರಿವರ್ಣ ಧ್ವಜವನ್ನು ಹೊತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ನಾವು ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ಬಂಧಿಸಿ, ಧ್ವಜವನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಧ್ವಜ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕಣದ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.
==
ಹಣದ ಭಾರ ಹಾಕದಿದ್ದರೆ ಫೈಲ್ ಮುಂದೆ ಸಾಗಲ್ಲ: ಗಡ್ಕರಿ
ಪುಣೆ: ಸರ್ಕಾರಿ ಕೆಲಸಗಳಲ್ಲಿ ಫೈಲ್‌ಗಳ ಮೇಲೆ ಹೆಚ್ಚಿನ ಹಣದ ಭಾರ ಹಾಕದಿದ್ದರೆ ಅವುಗಳು ಮುಂದೆ ಸಾಗುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ಸರ್ಕಾರಿ ಕೆಲಸಗಳಲ್ಲಿರುವ ಭ್ರಷ್ಟಾಚಾರದ ಬಗ್ಗೆ ಅವರು ಮಾತನಾಡಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ಸರ್ಕಾರಿ ಇಲಾಖೆಗಳಲ್ಲಿ ‘ನ್ಯೂಟನ್‌ನ ಅಪ್ಪಂದಿರಿದ್ದಾರೆ’. ಅವರಿಗೆ ಫೈಲ್‌ಗಳ ಮೇಲೆ ಹೆಚ್ಚು ಹಣದ ಭಾರ ಬೇಕಾಗಿರುತ್ತದೆ. ಹಣ ಬಿದ್ದರೆ ಫೈಲ್‌ಗಳು ಬೇಗ ಮುಂದೆ ಸಾಗಿ ಕೆಲಸ ಬೇಗ ಮುಗಿಯುತ್ತದೆ. ದೇಶದಲ್ಲಿ ಈ ವ್ಯವಸ್ಥೆ ಬದಲಾಗಬೇಕು. ಯುವಜನತೆ ತಮ್ಮ ಗುಣ ಮತ್ತು ಕೌಶಲ್ಯದ ಮೂಲಕ ದೇಶದ ದಿಕ್ಕು ಬದಲಿಸಬೇಕು’ ಎಂದು ಹೇಳಿದರು.
==
ಅತ್ಯಾಚಾರ: ದಿಲ್ಲಿ ಆಸ್ಪತ್ರೆ ಮಾಜಿ ವೈದ್ಯನಿಗೆ 5 ವರ್ಷ ಜೈಲು
ನವದೆಹಲಿ: ಅಂಗವಿಕಲ ಮಹಿಳೆ ಮೇಲೆ ಅತ್ಯಾಚಾರ ವೆಸಗಿದ್ದ ದೀನದಯಾಳ್ ಆಸ್ಪತ್ರೆಯ ಮಾಜಿ ವೈದ್ಯನಿಗೆ ಇಲ್ಲಿನ ನ್ಯಾಯಾಲಯ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.2021 ಅಕ್ಟೋಬರ್‌ನಲ್ಲಿ ಮಹಿಳೆ ತನ್ನ ಅಂಗವೈಕಲ್ಯ ಪ್ರಮಾಣಪತ್ರವನ್ನು ಪಡೆಯಲು ದೀನದಯಾಳ್ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಎಕ್ಸ್- ರೇ ತೆಗೆಯುವಾಗ ವೈದ್ಯ, ಮಹಿಳೆಯ ಖಾಸಗಿ ಅಂಗದಲ್ಲಿ ತನ್ನ ಬೆರಳು ತೂರಿಸಿ ಗಾಯಗೊಳಿಸಿದ್ದ. ಜತೆಗೆ ಆಕೆಯ ಕನ್ಯಾಪೊರೆಯನ್ನು ಭಾಗಶಃ ಛಿದ್ರಗೊಳಿಸಿದ್ದ.
ಈ ಹಿನ್ನೆಲೆಯನ್ನು ಆತನನ್ನು ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದರು.
==
ಹಾಸ್ಟೆಲ್‌ನಲ್ಲಿ ಗೋಮಾಂಸ ಅಡುಗೆ: 7 ವಿದ್ಯಾರ್ಥಿಗಳಿಗೆ ಗೇಟ್‌ಪಾಸ್
ಬೆರ್ಹಾಂಪುರ (ಒಡಿಶಾ): ಗೋಮಾಂಸದ ಅಡುಗೆಯನ್ನು ತಯಾರಿಸಿದ ಆರೋಪದ ಮೇಲೆ ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ 7 ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ವಜಾ ಮಾಡಲಾಗಿದೆ.ಗೋಮಾಂಸಕ್ಕೆ ನಿಷೇಧ ಇದ್ದರೂ ಕಳೆದ ಬುಧವಾರ ರಾತ್ರಿ ಈ ಏಳು ಜನ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಗೋಮಾಂಸದಿಂದ ಅಡುಗೆ ತಯಾರಿಸಿದ್ದರು. ಈ ವಿಚಾರ ತಿಳಿದು ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ, ಸಂಸ್ಥೆಯ ನೀತಿ, ನಿಯಮಗಳು ಉಲ್ಲಂಘಿಸಿದ್ದು, ನಿರ್ಬಂಧಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರಿಂದ ಈ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ವಜಾ ಮಾಡಲಾಗಿದೆ. ಜತೆಗೆ 7ರಲ್ಲಿ ಒಬ್ಬ ವಿದ್ಯಾರ್ಥಿಗೆ 2000 ರು. ದಂಡ ವಿಧಿಸಿದೆ. ಜತೆಗೆ ಈ ವಿಷಯವನ್ನು ಪೋಷಕರಿಗೆ ತಿಳಿಸಲಾಗಿದೆ ಎಂದು ತಿಳಿಸಿದೆ.
==
ಸ್ನಾನ ಮಾಡದ ಪತಿ ವಿರುದ್ಧ ವಿಚ್ಛೇದನಕ್ಕೆ ಪತ್ನಿ ಅರ್ಜಿ
ಆಗ್ರಾ: ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬರು ಮದುವೆಯಾದ ಕೇವಲ 40 ದಿನಗಳ ನಂತರ ಪತಿ ಸ್ನಾನವನ್ನೇ ಮಾಡುವುದಿಲ್ಲ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪತಿ ರಾಜೇಶ್ ತಿಂಗಳಿಗೆ ಹೆಚ್ಚೆಂದರೆ 2 ಬಾರಿ ಸ್ನಾನ ಮಾಡುತ್ತಾರೆ. ಏಕೆ ಸ್ನಾನ ಮಾಡಲ್ಲ ಎಂದು ಕೇಳಿದರೆ ವಾರಕ್ಕೆ 2 ದಿನ ಗಂಗಾಜಲ ಪ್ರೋಕ್ಷಿಸಿಕೊಳ್ಳುತ್ತೇನೆ. ಸ್ನಾನ ಏಕೆ ಬೇಕು ಎನ್ನುತ್ತಾರೆ ಎಂದು ಈ ಅನಾಮಧೇಯ ಮಹಿಳೆ ದೂರಿದ್ದಾರೆ. ಮದುವೆ ವೇಳೆ ಮಾತ್ರ ಪತ್ನಿಯ ಕಡೆಯವರ ಒತ್ತಾಯಕ್ಕೆ ಕಟ್ಟುಬಿದ್ದು, 6 ದಿನ ಈತ ಸತತ ಸ್ನಾನ ಮಾಡಿದ್ದ.