ಸಾರಾಂಶ
ನವದೆಹಲಿ : ಕಳೆದ ವರ್ಷ ನೂತನ ಸಂಸತ್ ಭವನದೊಳಗೆ ಅಕ್ರಮವಾಗಿ ನುಸುಳಿ ‘ಹೊಗೆ ಬಾಂಬ್’ ಸಿಡಿಸಿದ ಪ್ರಕರಣದಲ್ಲಿ ಕರ್ನಾಟಕದ ಮನೋರಂಜನ್ ಸೇರಿದಂತೆ 6 ಮಂದಿ ವಿರುದ್ಧ ದೆಹಲಿ ಪೊಲೀಸರು 2ನೇ ಸಲವೂ ಭಯೋತ್ಪಾದನೆಯ ಆರೋಪವನ್ನೂ ಹೊರಿಸಿ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ.
2001ರ ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆ ದಿನವೇ ಕಳೆದ ವರ್ಷ ಮನೋರಂಜನ್ ಡಿ. ಮತ್ತು ಸಾಗರ್ ಶರ್ಮಾ ಎಂಬ ಇಬ್ಬರು ಯುವಕರು ಸಂಸತ್ ಭವನದೊಳಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿ, ‘ಸರ್ವಾಧಿಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದ್ದರು. ಆ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿ, ತನಿಖೆ ನಡೆಸಿ, ಜೂ.7ರಂದು 1000 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಅದರಲ್ಲೂ ಯುಎಪಿಎ ಕಾಯ್ದೆ ಸೇರಿಸಲಾಗಿತ್ತು. ನಂತರ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಭಯೋತ್ಪಾದನೆಯ ಕೇಸ್ ದಾಖಲಿಸಲು ಮತ್ತೊಂದು ಅನುಮತಿ ಪಡೆದು, ಇದೀಗ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಮುಂದಿನ ವಿಚಾರಣೆ ಆ.2ಕ್ಕೆ ನಡೆಯಲಿದ್ದು, ಅಲ್ಲಿಯವರೆಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.