ಪೊಂಗಲ್‌ ‘ಏಕ ಭಾರತ ಶ್ರೇಷ್ಠ ಭಾರತ’ದ ಪ್ರತಿಬಿಂಬ ಎಂದ ಪ್ರಧಾನಿ ಮೋದಿ

| Published : Jan 15 2024, 01:45 AM IST / Updated: Jan 15 2024, 12:03 PM IST

ಸಾರಾಂಶ

ತಮಿಳು ನಾಡಿನ ಪ್ರಸಿದ್ಧ ಪೊಂಗಲ್‌ (ಮಕರ ಸಂಕ್ರಾಂತಿ) ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಆಗ ಪೊಂಗಲ್‌ ಹಬ್ಬದ ಆಚರಣೆ ಕುರಿತು ಮಾತನಾಡಿದ ಅವರು ‘ಪೊಂಗಲ್‌ ಹಬ್ಬವು ಏಕ್‌ ಭಾರತ್‌ ಶ್ರೇಷ್ಠ್‌ ಭಾರತ್‌’ದ ರಾಷ್ಟ್ರೀಯ ಭಾವನೆಯ ಪ್ರತಿಬಿಂಬ’ ಎಂದರು.

ಚೆನ್ನೈ/ನವದೆಹಲಿ: ‘ಪೊಂಗಲ್‌ ಹಬ್ಬವು ‘ಏಕ್‌ ಭಾರತ್‌ ಶ್ರೇಷ್ಠ್‌ ಭಾರತ್‌’ದ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಕೇಂದ್ರ ಸಚಿವ ಡಾ. ಎಲ್‌. ಮುರುಗನ್‌ ಅವರ ದಿಲ್ಲಿ ಮನೆಯಲ್ಲಿ ತಮಿಳು ನಾಡಿನ ಪ್ರಸಿದ್ಧ ‘ಪೊಂಗಲ್‌’ (ಸಂಕ್ರಾಂತಿ) ಹಬ್ಬದ ಆಚರಣೆಯಲ್ಲಿ ಮೋದಿ ಭಾಗಿಯಾಗಿದ್ದರು. 

ಬಳಿಕ ಮಾತನಾಡಿದ ಅವರು ‘ತಮಿಳುನಾಡಿನ ಪ್ರತಿಯೊಂದು ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತುಂಬಿರಲಿ’ ಎಂದು ಹಾರೈಸಿದರು. 

ಇದೇ ವೇಳೆ ‘ಕೋಲಂ’ (ರಂಗೋಲಿ) ನಿಂದ ಚಿತ್ರಗಳನ್ನು ಮೋದಿ ಬಿಡಿಸಿದರು. ‘ದೇಶದ ಪ್ರತಿಯೊಂದು ಮೂಲೆಯು ಪರಸ್ಪರ ಭಾವನಾತ್ಮಕವಾಗಿ ಸಂಪರ್ಕಗೊಂಡಾಗ ರಾಷ್ಟ್ರದ ಶಕ್ತಿಯು ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. 

ಪೊಂಗಲ್ ಹಬ್ಬವು ಏಕ್ ಭಾರತ್ ಶ್ರೇಷ್ಠ ಭಾರತ್ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಕಾಶಿ- ತಮಿಳು ಸಂಗಮಮ್ ಮತ್ತು ಸೌರಾಷ್ಟ್ರ- ತಮಿಳು ಸಂಗಮಂ ಆರಂಭಿಸಿದ ಸಂಪ್ರದಾಯದಲ್ಲಿ ಅದೇ ಮನೋಭಾವವಿದೆ. 

ಈ ಏಕತೆಯ ಭಾವನೆಯು 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೊಡ್ಡ ಶಕ್ತಿಯಾಗಿದೆ’ ಎಂದರು. ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಪೊಂಗಲ್‌ ಹಬ್ಬವನ್ನು 4 ದಿನಗಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. 

ತಮಿಳುನಾಡಿನ ಹೊಸ ವರ್ಷವಾದ ಪುಥಾಂಡು ಹಬ್ಬವನ್ನು ಆಚರಿಸಲು ಕಳೆದ ವರ್ಷ ಮೋದಿ ಅವರು ಮುರುಗನ್‌ ಅವರ ಮನೆಗೆ ಭೇಟಿ ನೀಡಿದ್ದರು.