ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹಗಳ ರಾಜಧಾನಿಯಾಗಿರುವ ‘ಪೋರ್ಟ್‌ ಬ್ಲೇರ್‌’ ಇನ್ನು ಶ್ರೀ ವಿಜಯಪುರಂ

| Published : Sep 14 2024, 01:53 AM IST / Updated: Sep 14 2024, 08:12 AM IST

ಸಾರಾಂಶ

ಪ್ರಸಿದ್ಧ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹಗಳ ರಾಜಧಾನಿಯಾಗಿರುವ ‘ಪೋರ್ಟ್‌ ಬ್ಲೇರ್‌’ನ ಹೆಸರನ್ನು ಕೇಂದ್ರ ಸರ್ಕಾರ ‘ಶ್ರೀ ವಿಜಯ ಪುರಂ’ ಎಂದು ಬದಲಾವಣೆ ಮಾಡಿದೆ. ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಈ ನಿರ್ಧಾರ ಪ್ರಕಟಿಸಿದ್ದಾರೆ.

ನವದೆಹಲಿ: ಪ್ರಸಿದ್ಧ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹಗಳ ರಾಜಧಾನಿಯಾಗಿರುವ ‘ಪೋರ್ಟ್‌ ಬ್ಲೇರ್‌’ನ ಹೆಸರನ್ನು ಕೇಂದ್ರ ಸರ್ಕಾರ ‘ಶ್ರೀ ವಿಜಯ ಪುರಂ’ ಎಂದು ಬದಲಾವಣೆ ಮಾಡಿದೆ. ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಈ ನಿರ್ಧಾರ ಪ್ರಕಟಿಸಿದ್ದಾರೆ.

‘ಬ್ರಿಟಿಷ್‌ ದಾಸ್ಯದ ಪಳೆಯುಳಿಕೆಗಳಿಂದ ದೇಶವನ್ನು ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ಪೂರಕವಾಗಿ ನಾವಿಂದು ಪೋರ್ಟ್‌ ಬ್ಲೇರ್‌ನ ಹೆಸರನ್ನು ಶ್ರೀ ವಿಜಯ ಪುರಂ ಎಂದು ಬದಲಾಯಿಸಲು ನಿರ್ಧರಿಸಿದ್ದೇವೆ’ ಎಂದು ಅಮಿತ್‌ ಶಾ ‘ಎಕ್ಸ್‌’ ಮಾಡಿದ್ದಾರೆ.

ಪೋರ್ಟ್‌ ಬ್ಲೇರ್ ಇತಿಹಾಸ:

1789ರಲ್ಲಿ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯು ಅಂಡಮಾನ್‌ನಲ್ಲಿ ಬಂಗಾಳ ಸರ್ಕಾರದ ಮೂಲಕ ಕೈದಿಗಳಿಗೆ ಶಿಕ್ಷೆ ವಿಧಿಸುವ ಪ್ರದೇಶವೊಂದನ್ನು ನಿರ್ಮಿಸಿತ್ತು. ಅದಕ್ಕೆ ಈಸ್ಟ್‌ ಇಂಡಿಯಾ ಕಂಪನಿಯ ಅಧಿಕಾರಿ ಆರ್ಚಿಬಾಲ್ಡ್‌ ಬ್ಲೇರ್‌ನ ಗೌರವಾರ್ಥ ಪೋರ್ಟ್‌ ಬ್ಲೇರ್‌ (ಬಂದರು) ಎಂದು ನಾಮಕರಣ ಮಾಡಿತ್ತು.

ನಂತರ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿವೆ. ಈ ದ್ವೀಪಗಳು ಹಿಂದೆ ಚೋಳ ರಾಜಮನೆತನದ ನೌಕಾನೆಲೆಯಾಗಿದ್ದವು. ಇಂದೂ ಕೂಡ ದೇಶದ ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಇಲ್ಲೇ ಮೊದಲ ತಿರಂಗಾ ಹಾರಿಸಿದ್ದರು. ವೀರ ಸಾವರ್ಕರ್‌ ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿನ ಸೆಲ್ಯುಲರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು. ಈ ಎಲ್ಲ ಐತಿಹಾಸಿಕ ವಿಷಯಗಳನ್ನು ಪರಿಗಣಿಸಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿರುವ ದ್ವೀಪಸಮೂಹಗಳ ರಾಜಧಾನಿಗೆ ‘ಶ್ರೀ ವಿಜಯ ಪುರಂ’ ಎಂದು ಹೆಸರಿಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.