ಆ.25ರಿಂದ ಅಮೆರಿಕಕ್ಕೆ ಅಂಚೆ ಸೇವೆಗಳು ತಾತ್ಕಾಲಿಕ ಸ್ಥಗಿತ

| N/A | Published : Aug 24 2025, 02:00 AM IST

ಸಾರಾಂಶ

ಆ.25ರಿಂದ ಜಾರಿಗೆ ಬರುವಂತೆ ಅಮೆರಿಕಕ್ಕೆ ಅಂಚೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಭಾರತೀಯ ಅಂಚೆ ಇಲಾಖೆ ಹೇಳಿದೆ.  

 ನವದೆಹಲಿ: ಆ.25ರಿಂದ ಜಾರಿಗೆ ಬರುವಂತೆ ಅಮೆರಿಕಕ್ಕೆ ಅಂಚೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಭಾರತೀಯ ಅಂಚೆ ಇಲಾಖೆ ಹೇಳಿದೆ. ಅಮೆರಿಕ ಸರ್ಕಾರದ ತೆರಿಗೆ ನೀತಿಯ ಕುರಿತ ಗೊಂದಲಗಳು ಇರುವ ಹಿನ್ನೆಲೆಯಲ್ಲಿ ಭಾರತದಿಂದ ಅಮೆರಿಕಕ್ಕೆ ಸಂಚರಿಸುವ ವಿಮಾನಗಳು ಅಂಚೆ ಸರಕು ಸ್ವೀಕಾರಕ್ಕೆ ನಿರಾಕರಿಸಿರುವ ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅಂಚೆ ಇಲಾಖೆ ಹೇಳಿದೆ.

ಇದುವರೆಗೂ 800 ಡಾಲರ್ (70,000 ರು.) ವರೆಗಿನ ಮೌಲ್ಯದ ವಸ್ತುಗಳಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿ ನೀತಿಯನ್ನು ಟ್ರಂಪ್‌ ರದ್ದು ಮಾಡಿದ್ದು, ಆ ಆದೇಶ ಆ.29ರಂದು ಜಾರಿಗೆ ಬರಲಿದೆ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಭಾರತದಿಂದ ಅಂಚೆ ಸರಕು ಸ್ವೀಕರಿಸಲು ನಿರಾಕರಿಸುತ್ತಿವೆ.

ಆದರೆ ಪತ್ರಗಳು ಮತ್ತು 100 ಡಾಲರ್ (8,730 ರು.) ಮೌಲ್ಯದವರೆಗಿನ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಹೀಗಾಗಿ ಅವುಗಳ ಸೇವೆ ಎಂದಿನಂತೆ ಮುಂದುವರೆಯಲಿವೆ. ಉಳಿದಂತೆ ಅಮೆರಿಕಕ್ಕೆ ಕಳಿಸುವ ಎಲ್ಲಾ ವಸ್ತುಗಳ ಬುಕಿಂಗ್ ಆ.25ರಿಂದ ಸ್ಥಗಿತಗೊಳ್ಳಲಿದೆ. ಹೊಸ ನಿಯಮದಡಿ ರವಾನೆಗೆ ಅರ್ಹವಲ್ಲದ ವಸ್ತುಗಳನ್ನು ಈಗಾಗಲೇ ಬುಕ್ ಮಾಡಿರುವ ಗ್ರಾಹಕರು ಅಂಚೆ ವೆಚ್ಚದ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು ಎಂದು ಅಂಚೆ ಇಲಾಖೆ ತಿಳಿಸಿದೆ.

Read more Articles on