ಸಾರಾಂಶ
ನವದೆಹಲಿ: ಮಹಾರಾಷ್ಟ್ರದ ಸುಪ್ರಸಿದ್ಧ ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು ಕದ್ದು ಭಾರೀ ಟೀಕೆ ಎದುರಿಸಿ, ಬಳಿಕ ಕ್ಷಮೆ ಯಾಚಿಸಿದ್ದ ಇಟಲಿಯ ಪ್ರಾಡಾ ಕಂಪನಿ ಈಗ ಮತ್ತದೇ ಕೆಲಸ ಮಾಡಿದೆ. ಈಬಾರಿ, ರಾಜಸ್ಥಾನದ ಸಾಂಪ್ರದಾಯಿಕ ‘ಜುತ್ತಿ’ ಪಾದರಕ್ಷೆಯನ್ನು ಹೋಲುವ ಹೀಲ್ಸ್ ಚಪ್ಪಲಿ ತಯಾರಿಸಿ ಮತ್ತೆ ಛೀಮಾರಿ ಹಾಕಿಸಿಕೊಂಡಿದೆ.
ಜುತ್ತಿ ಎನ್ನುವುದು ಚರ್ಮವನ್ನು ಬಳಸಿ ಕೈಯ್ಯಿಂದ ತಯಾರಿಸಲಾಗುವ ರಾಜಸ್ಥಾನದ ಪಾರಂಪರಿಕ ಪಾದರಕ್ಷೆ. ಇದರ ಅಡಿಭಾಗ ಚಪ್ಪಟೆಯಾಗಿದ್ದು, ಹಿಮ್ಮಡಿ ಮತ್ತು ಕಾಲ್ಬೆರಳುಗಳು ಮುಚ್ಚುವಂತಿರುತ್ತದೆ. ಅವುಗಳ ಮೇಲೆ ಎದ್ದುಕಾಣುವಂತೆ ಎಂಬ್ರಾಯ್ಡರಿ ಮಾಡಲಾಗಿರುತ್ತದೆ. ಎರಡೂ ಚಪ್ಪಲಿಗಳು ಒಂದೇ ರೀತಿ ಕಾಣುವ ಕಾರಣ, ಜುತ್ತಿಯನ್ನು ಯಾವ ಕಾಲಿಗೆ ಬೇಕಾದರೂ ತೊಟ್ಟುಕೊಳ್ಳಬಹುದು.ಈಗ ಜುತ್ತಿಗಳನ್ನೇ ಹೋಲುವ ಚಪ್ಪಲಿಗಳನ್ನು ತಯಾರಿಸಿರುವ ಪ್ರಾಡಾ, ಅದಕ್ಕೆ ಚೂಪಾದ ಹೀಲ್ಸ್ ಸೇರಿಸಿ ತನ್ನ ಹೆಸರನ್ನಂಟಿಸಿಕೊಂಡಿದೆ. ಆದರೆ ತನ್ನ ಹಳೆ ಚಾಳಿಯಂತೆ, ಭಾರತದ ಕಲೆಗೆ ಈಬಾರಿಯೂ ಬೆಲೆ ನೀಡಿಲ್ಲ.
==ಬಂಗಾಳದಲ್ಲಿ ನಿತ್ಯ 25, ವರ್ಷಕ್ಕೆ 9000 ಜನ ನೀರಲ್ಲಿ ಮುಳುಗಿ ಸಾವು
ಕೋಲ್ಕತಾ: ಪಶ್ಷಿಮ ಬಂಗಾಳದಲ್ಲಿ ಪ್ರತಿದಿನ ಸರಾಸರಿ 25ಕ್ಕೂ ಹೆಚ್ಚಿನ ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದು, ಈ ಪೈಕಿ ಮಕ್ಕಳ ಪ್ರಮಾಣವೇ ಅಧಿಕವೆಂದು ಸಮೀಕ್ಷೆಯೊಂದು ಹೇಳಿದೆ. ಚೈಲ್ಡ್ ಇನ್ ನೀಡ್ ಇನ್ಸ್ಟಿಟ್ಯೂಟ್ (ಸಿಐಎನ್ಐ) ಮತ್ತು ದಿ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಈ ಬಗ್ಗೆ ವರದಿ ಸಿದ್ಧಪಡಿಸಿದೆ. ರಾಜ್ಯ ದಲ್ಲಿ ಪ್ರತಿ ವರ್ಷ 9000 ಮಂದಿ ನೀರಿನ ಅವಘಡದಲ್ಲಿ ಸಾವನ್ನಪ್ಪುತ್ತಾರೆ. ಇದರಲ್ಲಿ 1- 9 ವರ್ಷದ ಆಸುಪಾಸಿನ ಮಕ್ಕಳೇ ಹೆಚ್ಚು ಅನಾಹುತಕ್ಕೆ ಬಲಿಯಾಗುತ್ತಿದ್ದು, ಪ್ರತಿ ಲಕ್ಷಕ್ಕೆ 121 ಮರಣ ಪ್ರಮಾಣ ದಾಖಲಾಗಿದೆ. ಇದು ಜಾಗತಿಕವಾಗಿಯೇ ಅತ್ಯಧಿಕ ದರ ಎಂದು ವರದಿ ಹೇಳಿದೆ. ಇನ್ನು ಪ್ರತಿ ವರ್ಷ ಜಗತ್ತಿನಲ್ಲಿ 3 ಲಕ್ಷ ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದು ಅದರಲ್ಲಿ ಶೇ. 18ರಷ್ಟು ಸಾವು ಭಾರತದಲ್ಲೇ ಸಂಭವಿಸಿದೆ ಎನ್ನುವ ಅಂಶ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
==ವಯನಾಡು ಭೂಕುಸಿತ: ಏಕಾಂಗಿಯಾದ ಯವಕನ ಹೋಟೆಲ್ ಹೆಸರು ಜು.30
ವಯನಾಡು: ಕಳೆದ ವರ್ಷ ಭೀಕರ ಭೂಕುಸಿತಕ್ಕೆ ಕುಟುಂಬದ 11 ಜನರನ್ನು ಕಳೆದುಕೊಂಡಿದ್ದ ಕೇರಳದ ವ್ಯಕ್ತಿಯೊಬ್ಬರು 1 ವರ್ಷದ ಬಳಿಕ ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಂಡು ಸ್ವಂತ ಹೋಟೆಲ್ ಸ್ಥಾಪಿಸಿದ್ದಾರೆ. ಅದಕ್ಕೆ ಭೂಕುಸಿತ ಸಂಭವಿಸಿದ ತಾರೀಖು ‘ಜುಲೈ 30’ ಎಂದು ಹೆಸರಿಟ್ಟಿದ್ದಾರೆ. ಕಳೆದ ವರ್ಷ ಜು.30ರಂದು ಸಂಭವಿಸಿದ ಭೂಕುಸಿತದ ವೇಳೆ ಒಮಾನ್‌ನಲ್ಲಿ ಚೆಫ್ ಆಗಿ ಕೆಲಸ ಮಾಡುತ್ತಿದ್ದ ನೌಫಲ್ ಎಂಬುವರು ತಮ್ಮ ಕುಟುಂಬದ 11 ಜನರನ್ನು ಕಳೆದುಕೊಂಡಿದ್ದರು. ದುರ್ಘಟನೆಯಲ್ಲಿ ತಮ್ಮ ಮನೆ, ಮನೆಯವರನ್ನು ಎಲ್ಲರನ್ನು ಕಳೆದುಕೊಂಡಿದ್ದರು. ಇದರಿಂದ ಎದೆಗುಂದದೆ, ತಮ್ಮ ಮುಸ್ಲಿಂ ಸಂಘಟನೆಯ ಸಹಾಯದಿಂದ ಸ್ವಂತ ಹೋಟೆಲ್, ಮನೆ ಕಟ್ಟಿಕೊಂಡು ಆದರ್ಶ ಜೀವನ ನಡೆಸುತ್ತಿದ್ದಾರೆ. ಇವರ ಜೀವನೋತ್ಸಾಹಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
==ಅಂಬಾನಿ ವನತಾರಾದಿಂದ ಆನೆ ಆರೈಕೆ ಕಾರ್ಯಾಗಾರ
ಜಾಮ್‌ನಗರ: ಪ್ರಾಣಿಪ್ರೇಮಿ, ಉದ್ಯಮಿ ಅನಂತ್ ಅಂಬಾನಿ ಅವರ ವನತಾರಾದ ವತಿಯಿಂದ ‘ಪ್ರಾಜೆಕ್ಟ್ ಎಲಿಫೆಂಟ್’ ಅಡಿಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಗಜಗಳ ಆರೈಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ 5 ದಿನದ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 100ಕ್ಕೂ ಅಧಿಕ ಮಾವುತರು ಭಾಗವಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವನತಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವಾನ್ ಕರಣಿ, ‘ಇದು ಆನೆಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಸಲ್ಲಿಸುವ ಗೌರವವಾಗಿದೆ. ಆನೆಗಳ ಯೋಗಕ್ಷೇಮಕ್ಕಾಗಿ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುವುದು ನಮ್ಮ ಗುರಿಯಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವಿವಿಧ ಆನೆ ಆರೈಕೆ ವಲಯಗಳಲ್ಲಿ ತಜ್ಞರಿಂದ ತರಬೇತಿ ನೀಡಲಾಗುವುದು ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನೂ ಆಯೋಜಿಸಲಾಗುವುದು.