ವಿಜಯವಾಡದಲ್ಲಿ ಕಂಡು ಕೇಳರಿಯದ ಪ್ರವಾಹ : ಪ್ರಕಾಶಂ ಬ್ಯಾರೇಜ್‌ಗೆ ದೋಣಿ ಡಿಕ್ಕಿ, ಗೇಟ್‌ ಹಾನಿ

| Published : Sep 04 2024, 01:52 AM IST / Updated: Sep 04 2024, 05:56 AM IST

ಸಾರಾಂಶ

ಆಂಧ್ರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯ ನಡುವೆ ವಿಜಯವಾಡದ ಬಳಿ ಪ್ರಕಾಶಂ ಬ್ಯಾರೇಜ್‌ಗೆ ಮೂರು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಬ್ಯಾರೇಜ್‌ನ 69ನೇ ಗೇಟ್‌ ಹಾನಿಗೊಂಡಿದೆ. ಈ ಅಪಘಾತದಿಂದಾಗಿ 11.25 ಲಕ್ಷ ಕ್ಯುಸೆಕ್ ನೀರು ಹೊರಬಿದ್ದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.

ಅಮರಾವತಿ: ಕಂಡು ಕೇಳರಿಯದ ಪ್ರವಾಹಕ್ಕೆ ಸಿಲುಕಿರುವ ಆಂಧ್ರ ಪ್ರದೇಶದ ವಿಜಯವಾಡ ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳಿಗೆ ಮತ್ತೊಂದು ಆತಂಕ ಎದುರಾಗಿದೆ. ನಗರದ ತಪ್ಪಲಿನಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಪ್ರಕಾಶಂ ಬ್ಯಾರೇಜ್‌ಗೆ ಮೂರು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಅದರ 69ನೇ ಗೇಟ್‌ ಹಾನಿಯಾಗಿದೆ.

ಪರಿಣಾಮ 11.25 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಹೀಗಾಗಿ ಎನ್‌ಟಿಆರ್‌, ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳಿಗೆ ಮತ್ತಷ್ಟು ಪ್ರವಾಹದ ಆತಂಕ ಮನೆ ಮಾಡಿದೆ. ತುಂಗ ಭದ್ರಾ ಡ್ಯಾಂ ಗೇಟ್‌ ರಿಪೇರಿ ನಿರ್ವಹಿಸಿದ್ದ ಕನ್ಹಯ್ಯ ನಾಯ್ಡು ಅವರಿಗೆ ಇದರ ರಿಪೇರಿ ಹೊಣೆ ನೀಡಲಾಗಿದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಪರಿಣಾಮ ನದಿಯಲ್ಲಿ ಕಾರ್ಯಾಚರಣೆ ನಡೆಸುವ ದೋಣಿಗಳನ್ನು ಕಟ್ಟಿಹಾಕಲಾಗಿತ್ತು. ಆದರೆ ನೀರಿನ ತೀವ್ರತೆ ತಡೆಯದ ಮೂರುಗಳು ದೋಣಿಗಳು ಕಟ್ಟು ಬಿಡಿಸಿಕೊಂಡು 40 ಕಿಲೋಮೀಟರ್‌ ವೇಗದಲ್ಲಿ ಡ್ಯಾಂಗೆ ಅಪ್ಪಳಿಸಿದೆ. ಹೀಗಾಗಿ 69ನೇ ಗೇಟ್‌ ಭದ್ರತೆಗೆ ನಿರ್ಮಿಲಾಗಿದ್ದ ಕಾಂಕ್ರಿಟ್‌ ಪೀಠ ತೀವ್ರವಾಗಿ ಹಾನಿಯಾಗಿದೆ. ಇದರ ಅಪಾಯ ತಪ್ಪಿಸಲು ಬ್ಯಾರೇಜ್‌ಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಜೊತೆಗೆ ನದಿಯಿಂದ 11.25 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

ಕನ್ಹಯ್ಯ ನಾಯ್ಡು ಅವರಿಗೆ ರಿಪೇರಿ ಹೊಣೆ:

ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್‌ ಮುರಿದುಹೋದಾಗ ಅದರ ರಿಪೇರಿಯನ್ನು ಇದೇ ಕನ್ಹಯ್ಯ ನಾಯ್ಡು ಅವರಿಗೆ ನೀಡಲಾಗಿತ್ತು. ಈಗ ಪ್ರಕಾಶಂ ಬ್ಯಾರೇಜ್‌ ರಿಪೇರಿ ಹೊಣೆಯನ್ನು ಇವರಿಗೆ ವಹಿಸಲಾಗಿದೆ.

ಪ್ರವಾಹ ಸ್ಥಳಕ್ಕೆ ಕಾಪ್ಟರ್‌ ಮೂಲಕ ಆಹಾರ ಪೂರೈಕೆ:

ವಿಜಯವಾಡದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ನೌಕಾಪಡೆ ಮತ್ತು ವಾಯು ಪಡೆಯ 6 ಹೆಲಿಕಾಪ್ಟರ್‌ ಮತ್ತು ಡ್ರೋನ್‌ಗಳ ಮೂಲಕ ಆಹಾರ ಪೊಟ್ಟಣ, ಹಾಲು, ಕುಡಿಯುವ ನೀರು, ಔಷಧಗಳು ಮತ್ತು ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.