ಸಾರಾಂಶ
ನವದೆಹಲಿ: ಆಕಾಶವಾಣಿ ಮತ್ತು ದೂರದರ್ಶನ ಪ್ರಸಾರವನ್ನು ಇನ್ನಷ್ಟು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ‘ಪ್ರಸಾರ ಭಾರತಿ’ ತನ್ನ ಓವರ್ ದಿ ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್ ‘ವೇವ್ಸ್’ ಅನ್ನು ಅನಾವರಣಗೊಳಿಸಿದೆ. ಇದರ ಚಂದಾದಾರಿಕೆ ವರ್ಷಕ್ಕೆ ಪ್ಲಾಟಿಂ ಪ್ಲಾನ್ 999 ರು., ಡೈಮೆಂಡ್ ಮತ್ತು ಗೋಲ್ಡ್ ಪ್ಲಾನ್ 350 ರು. ಇರಲಿದೆ. ಇದರ ಮೂಲಕ ವಿವಿಧ ಭಾಷೆಯ ಸುದ್ದಿವಾಹಿನಿಗಳೂ, ಸರ್ಕಾರಿ ಕಾರ್ಯಕ್ರಮಗಳ ನೇರಪ್ರಸಾರ, ಧಾರ್ಮಿಕ, ಪ್ರಾದೇಶಿಕ ಕಾರ್ಯಕ್ರಗಳು, ಚಲನಚಿತ್ರ, ಧಾರಾವಾಹಿ, ಲೈವ್ ಸ್ಟ್ರೀಂಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ವೇವ್ಸ್‌ನಲ್ಲಿ ಪ್ರಸಾರವಾಗಲಿವೆ. ಇದರಲ್ಲಿ ಮುಖ್ಯವಾಗಿ ಆರ್ಕೈವ್ ಸಹ ಲಭ್ಯವಿದ್ದು, ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮಗಳನ್ನು ಅದರಲ್ಲಿ ವೀಕ್ಷಿಸಬಹುದು.
ನೆತನ್ಯಾಹು, ಹಮಾಸ್ ಅಧಿಕಾರಿಗಳ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ಹೇಗ್ (ನೆದರ್ನೆಂಡ್): ಯುದ್ಧಾಪರಾಧಗಳು ಹಾಗೂ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಎಸಗಿರುವ ಆರೋಪದ ಮೇಲೆ ಇಸ್ರೇಲ್ ಪ್ರಾಧನಿ ಬೆಂಜಮಿನ್ ನೆತನ್ಯಾಹು, ಮಾಜಿ ರಕ್ಷಣಾ ಸಚಿವ ಹಾಗೂ ಹಮಾಸ್ ನಾಯಕರ ಮೇಲೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಈ ಮೂಲಕ ಅವರನ್ನು ಜಾಗತಿಕವಾಗಿ ಏಕಾಂಗಿಯಾಗಿಸಿ ಕದನವಿರಾಮಕ್ಕೆ ಪ್ರೋತ್ಸಾಹಿಸಲು ಪ್ರಯತ್ನಿಸಿದೆ. ಈ ನಡುವೆ ತಮ್ಮ ವಿರುದ್ಧದ ಆದೇಶವನ್ನು ಖಂಡಿಸಿರುವ ನೆತನ್ಯಾಹು, ‘ಈ ಅಸಂಬದ್ಧ ಮತ್ತು ಸುಳ್ಳು ಕ್ರಮಗಳನ್ನು ಅಸಹ್ಯದಿಂದ ತಿರಸ್ಕರಿಸುತ್ತೇವೆ’ ಎಂದಿದ್ದಾರೆ. ಅತ್ತ ಹಮಾಸ್ ಉಗ್ರರಿಂದ ರಕ್ಷಿಸಿಕೊಳ್ಳುವುದು ಇಸ್ರೇಲ್‌ನ ಹಕ್ಕು ಎಂದು ಅಮೆರಿಕ ಹೇಳಿದೆ. ಹಮಾಸ್ ನಾಯಕರೂ ಐಸಿಸಿ ಆದೇಶವನ್ನು ಖಂಡಿಸಿದ್ದಾರೆ.
ಪಾಕಿಸ್ತಾನದ ಶಿಯಾ ಪಂಗಡದ ವಾಹನದ ಮೇಲೆ ದಾಳಿ: 50 ಬಲಿ
ಪೇಶಾವರ: ಶಿಯಾ ಮುಸ್ಲಿಂ ಪಂಗಡದವರು ಸಾಗುತ್ತಿದ್ದ ವಾಹನದ ಮೇಲೆ ಗುರುವಾರ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ 8 ಮಹಿಳೆಯರು, ಐವರು ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಾಮ್ ಜಿಲ್ಲೆಯಲ್ಲಿ ನಡೆದಿದೆ. ದಾಳಿಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಸುನ್ನಿ ಮತ್ತು ಶಿಯಾ ಪಂಗಡದ ನಡುವೆ ಇತ್ತೀಚೆಗೆ ಘರ್ಷಣೆಗಳು ನಡೆಯುತ್ತಿದ್ದು, ಅನೇಕ ಮಂದಿ ಬಲಿಯಾಗಿದ್ದಾರೆ. ಈ ದಾಳಿಯ ಹಿಂದೆಯೂ ಸುನ್ನಿಗಳ ಕೈವಾಡದ ಶಂಕೆ ವ್ಯಕ್ತವಾಗಿದೆ.
ಬೆಂಗ್ಳೂರಲ್ಲಿ ಇಂಟರ್ನೆಟ್ ಕೇಬಲ್‌ಗೆ ಹಾನಿ ಕುರಿತು ಸಿಒಎಐ ತೀವ್ರ ಕಳವಳ
ನವದೆಹಲಿ: ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರಿನಲ್ಲಿ ಇಂಟರ್ನೆಟ್ ಕೇಬಲ್ ಕತ್ತರಿಸುವ ಪ್ರಕಣಗಳು ಹೆಚ್ಚಾಗಿದೆ ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಒಎಐ) ಮಹಾನಿರ್ದೇಶಕ ಲೆ.ಜ. ಡಾ. ಎಸ್.ಪಿ. ಕೊಚ್ಚರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ವಿವಿಧ ಇಂಟರ್ನೆಟ್ ಸೇವೆ ಒದಗಿಸುವ ಹಾಗೂ ಟೆಲಿಕಾಂ ಆಪರೇಟರ್ ಕಂಪನಿಗಳ ಫೈಬರ್ ಕೇಬಲ್‌ಗಳನ್ನು ಕತ್ತರಿಸಿರುವುದು ಹೆಚ್ಚಾಗಿದೆ. ಐಟಿ ಮೇಳ ನಡೆಯುತ್ತಿರುವ ಸಂದರ್ಭದಲ್ಲಿ ಇಂಥ ಕೃತ್ಯಗಳಿಂದ ಬೆಂಗಳೂರಿನ ವರ್ಚಸ್ಸಿಗೆ ಪೆಟ್ಟು ಬಿದ್ದಂತೆ ಎಂದು ತಿಳಿಸಿದರು.
ಒಂದೆಡೆ ಕಟ್ಟಡ ಧ್ವಂಸ ಮಾಡಿ ಮತ್ತೊಂದೆಡೆ ಸಾಹಿತ್ಯ ಪ್ರಶಸ್ತಿ: ಜೆಸಿಬಿ ವಿರುದ್ಧ ಸಾಹಿತಿ ಕಿಡಿ
ನವದೆಹಲಿ: ಪ್ರತಿಷ್ಠಿತ ‘ಜೆಸಿಬಿ ಸಾಹಿತ್ಯ ಪ್ರಶಸ್ತಿ’ಯ ಪ್ರಾಯೋಜಕ ಸಂಸ್ಥೆಯಾದ ಬ್ರಿಟನ್ ಮೂಲದ ಜೆಸಿಬಿ ವಿರುದ್ಧ ಹಲವು ಸಾಹಿತಿಗಳು, ಅನುವಾದಕರು, ಪ್ರಕಾಶಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಭಾರತದ ಹಲವು ಕಡೆ ನಡೆದ ಮುಸ್ಲಿಮರ ಮನೆ, ಕಟ್ಟಡ ಧ್ವಂಸಕ್ಕಾಗಿ ಜೆಸಿಬಿ ಕಂಪನಿ ಯಂತ್ರ ಬಳಸಲಾಗಿದೆ. ಅದನ್ನು ಬುಲ್ಡೋಜರ್ ನ್ಯಾಯ ಎನ್ನಲಾಗುತ್ತಿದೆ. ಮತ್ತೊಂದೆಡೆ ಅದೇ ಸಂಸ್ಥೆ ಸಾಹಿತ್ಯ ಪ್ರಶಸ್ತಿ ನೀಡುತ್ತಿದೆ. ಇದೊಂದು ಬೂಟಾಟಿಕೆ ಎಂದು ಕಿಡಿಕಾರಿದ್ದಾರೆ. ಪ್ರಸಕ್ತ ಸಾಲಿನ ಜೆಸಿಬಿ ಸಾಹಿತ್ಯ ಪ್ರಶಸ್ತಿ ನ.23ರಂದು ಪ್ರಕಟ ಮಾಡಲಾಗುತ್ತಿದ್ದು, ಅದಕ್ಕೂ ಮೊದಲು ಕವಿ, ವಿಮರ್ಶಕ ಕೆ. ಸಚ್ಚಿದಾನಂದನ್, ಪ್ರಕಾಶಕ ಅಜಾದ್ ಜೈದಿ, ಕವಿ ಜಸಿಂತಾ ಕೆರ್ಕೆಟ್ಟಾ, ಕಾದಂಬರಿಕಾರ ಸೈಂಥಿಯಾ ಸ್ಟೆಫಾನ್ ಸೇರಿದಂತೆ ಹಲವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.