ಚುನಾವಣೆ ಮುಗಿಯುವವರೆಗೂ ಅಲ್ಲೇ ಠಿಕಾಣಿ ಹೂಡಿ ಪ್ರಚಾರ ನಡೆಸಲಿದ್ದು, ಸೋದರ ರಾಹುಲ್‌, ಆಪ್ತ ಶರ್ಮಾರನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದಾರೆ.

 ನವದೆಹಲಿ : ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಷ್ಠೆಯ ಕ್ಷೇತ್ರಗಳಾಗಿರುವ ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಅಮೇಠಿಯಲ್ಲಿ ಪಕ್ಷವನ್ನು ಗೆಲ್ಲಿಸುವ ಹೊಣೆಯನ್ನು ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಾವೇ ಹೊತ್ತುಕೊಂಡಿದ್ದಾರೆ. ಚುನಾವಣೆ ಮುಗಿಯುವವರೆಗೆ ಅವರು ಅಲ್ಲೇ ಠಿಕಾಣಿ ಹೂಡಲಿದ್ದು, ರಾಯ್‌ಬರೇಲಿಯಲ್ಲಿ ಸಹೋದರ ರಾಹುಲ್‌ ಗಾಂಧಿ ಹಾಗೂ ಅಮೇಠಿಯಲ್ಲಿ ತಮ್ಮ ಕುಟುಂಬದ ಆಪ್ತ ಕಿಶೋರಿ ಲಾಲ್‌ ಶರ್ಮಾ ಪರ ಸತತವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಕಷ್ಟು ವಿಳಂಬ ಮಾಡಿ ಈ ಎರಡು ಕ್ಷೇತ್ರಗಳಿಗೆ ಶುಕ್ರವಾರ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿತ್ತು. ರಾಯ್‌ಬರೇಲಿಗೆ ಎರಡು ದಶಕದಿಂದ ಸೋನಿಯಾ ಗಾಂಧಿ ಸಂಸದೆಯಾಗಿದ್ದು, ಈ ಬಾರಿ ಆ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸಿದ್ದಾರೆ. ಇನ್ನು, ಅಮೇಠಿಯಲ್ಲಿ ರಾಹುಲ್‌ ಕಳೆದ ಬಾರಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದು, ಈ ಬಾರಿ ಅಲ್ಲಿಗೆ ಕಿಶೋರಿ ಲಾಲ್‌ ಶರ್ಮಾ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಸ್ಮೃತಿ ಇರಾನಿಯೇ ಅಭ್ಯರ್ಥಿ. ರಾಯ್‌ಬರೇಲಿಯಲ್ಲಿ ಕಳೆದ ಬಾರಿ ಸೋನಿಯಾ ವಿರುದ್ಧ ಸೋತಿದ್ದ ದಿನೇಶ್‌ ಪ್ರತಾಪ್‌ ಸಿಂಗ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಈ ಎರಡೂ ಕ್ಷೇತ್ರಗಳ ಜವಾಬ್ದಾರಿಯನ್ನು ಪ್ರಿಯಾಂಕಾ ಈಗಾಗಲೇ ತೆಗೆದುಕೊಂಡಿದ್ದು, ಸೋಮವಾರದಿಂದಲೇ ಸತತ ಪ್ರಚಾರ ನಡೆಸಲಿದ್ದಾರೆ. ಎರಡೂ ಕ್ಷೇತ್ರದಲ್ಲಿ ತಲಾ 250ರಿಂದ 300 ಹಳ್ಳಿಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.