ಸಾರಾಂಶ
ಪುಣೆ ವಿವಿಯಲ್ಲಿ ಅಸಭ್ಯವಾಗಿ ರಾಮಾಯಣ ನಾಟಕ ಪ್ರದರ್ಶನ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪುಣೆ: ರಾಮಾಯಣ ಆಧಾರಿತ ನಾಟಕ ಪ್ರದರ್ಶನದಲ್ಲಿ ಸೀತಾ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಲಕ್ಷ್ಮಣನು ಸಿಗರೇಟ್ ಹೊತ್ತಿಸಿ ಕೊಡುತ್ತಿರುವಂತೆ ಆಕ್ಷೇಪಾರ್ಹವಾಗಿ ನಾಟಕ ಪ್ರದರ್ಶನ ಮಾಡಿರುವ ಘಟನೆ ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ನಾಟಕದ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿವಾದದ ಬೆನ್ನಲ್ಲೇ ದೂರಿನ ಮೇರೆಗೆ ವಿವಿಯ ಪ್ರಾಧ್ಯಾಪಕ ಮತ್ತು ನಾಟಕ ಮಾಡಿದ್ದ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿವಿಯ ಲಲಿತ ಕಲಾ ಕೇಂದ್ರದಿಂದ ಶುಕ್ರವಾರ ಸಂಜೆ ಕ್ಯಾಂಪಸ್‌ನಲ್ಲಿ ಪ್ರದರ್ಶಿಸಲಾದ ‘ರಾಮಲೀಲಾ’ ನಾಟಕ ಪ್ರದರ್ಶನದಲ್ಲಿ ಸೀತಾ ಪಾತ್ರಧಾರಿಗೆ ಲಕ್ಷ್ಮಣ ಪಾತ್ರಧಾರಿಯು ಸಿಗರೇಟ್ ಹೊತ್ತಿಸಿಕೊಡುತ್ತಿರುವಂತೆ ಮತ್ತು ನಿಂದನೀಯ ಭಾಷೆ ಬಳಸಿರುವ ರೀತಿ ಅಸಭ್ಯವಾಗಿ ನಟಿಸಲಾಗಿದೆ.