ಭಾರತದ ಬತ್ತಳಿಕೆಗೆ ಈಗ ದೇಶಿ ದಿವ್ಯಾಸ್ತ್ರ!

| Published : Mar 12 2024, 02:03 AM IST / Updated: Mar 12 2024, 07:58 AM IST

ಸಾರಾಂಶ

ಒಟ್ಟಿಗೇ ಹಲವು ಸಿಡಿತಲೆಗಳನ್ನು ಹೊತ್ತೊಯ್ದು ಏಕಕಾಲಕ್ಕೆ 10 ಗುರಿಗಳ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ‘ಅಗ್ನಿ-5 ಕ್ಷಿಪಣಿ’ಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ.

ನವದೆಹಲಿ: ಒಟ್ಟಿಗೇ ಹಲವು ಸಿಡಿತಲೆಗಳನ್ನು ಹೊತ್ತೊಯ್ದು ಏಕಕಾಲಕ್ಕೆ 10 ಗುರಿಗಳ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ‘ಅಗ್ನಿ-5 ಕ್ಷಿಪಣಿ’ಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. 

ನೆರೆಯ ಚೀನಾ, ಪಾಕಿಸ್ತಾನ ಸೇರಿದಂತೆ 5ರಿಂದ 6 ಸಾವಿರ ಕಿ.ಮೀ. ವ್ಯಾಪ್ತಿಯ ಏಷ್ಯಾ ಖಂಡದ ಬಹುತೇಕ ಭಾಗ ತಲುಪಬಲ್ಲ ಈ ಕ್ಷಿಪಣಿಯ ಯಶಸ್ವಿ ಉಡ್ಡಯನದ ಮಾಹಿತಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಈ ಪ್ರಯೋಗಕ್ಕೆ ‘ಮಿಶನ್‌ ದಿವ್ಯಾಸ್ತ್ರ’ ಎಂದು ಹೆಸರಿಡಲಾಗಿದ್ದು, ಸಾಧನೆಗಾಗಿ ಡಿಆರ್‌ಡಿಒ ವಿಜ್ಞಾನಿಗಳನ್ನು ಪ್ರಶಂಸಿಸಿದ್ದಾರೆ.ಇಂಥದ್ದೊಂದು ಯಶಸ್ವಿ ಹಾರಾಟದ ಮೂಲಕ ಸಂಪೂರ್ಣ ಸ್ವದೇಶಿ ಎಂಐಆರ್‌ವಿ (ಮಲ್ಟಿಪಲ್‌ ಇಂಡಿಪೆಂಡೆಟ್ಲಿ ಟಾರ್ಗೆಟಬಲ್‌ ರೀ ಎಂಟ್ರಿ ವೆಹಿಕಲ್‌) ತಂತ್ರಜ್ಞಾನವನ್ನು ಸಿದ್ಧಿಸಿಕೊಂಡ ವಿಶ್ವದ 5 ದೇಶಗಳ ಜತೆಗೆ 6ನೇ ದೇಶವಾಗಿ ಭಾರತ ಸೇರಿಕೊಂಡಂತೆ ಆಗಿದೆ. 

ಈವರೆಗೆ ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಹಾಗೂ ಚೀನಾ ಮಾತ್ರ ಈ ತಂತ್ರಜ್ಞಾನ ಹೊಂದಿದ್ದವು. ಒಡಿಶಾದ ವ್ಹೀಲರ್‌ ಐಲ್ಯಾಂಡ್‌ನಲ್ಲಿ ಎಂಐಆರ್‌ವಿ ತಂತ್ರಜ್ಞಾನ ಹೊಂದಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷೆ ನಡೆದಿದೆ.

ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಮಲ್ಟಿಪಲ್‌ ಇಂಡಿಪೆಂಡೆಟ್ಲಿ ಟಾರ್ಗೆಟಬಲ್‌ ರೀ ಎಂಟ್ರಿ ವೆಹಿಕಲ್‌ (ಎಂಐಆರ್‌ವಿ) ತಂತ್ರಜ್ಞಾನ ಒಳಗೊಂಡ ಸ್ವದೇಶಿ ಅಗ್ನಿ-5 ಕ್ಷಿಪಣಿಯ ಮೊದಲ ಉಡ್ಡಯನ ಯಶಸ್ವಿಯಾಗಿದೆ. 

ಮಿಷನ್‌ ದಿವ್ಯಾಸ್ತ್ರ ಕುರಿತ ಡಿಆರ್‌ಡಿಓ ವಿಜ್ಞಾನಿಗಳ ಸಾಧನೆ ಬಗ್ಗೆ ಹೆಮ್ಮೆ ಇದೆ’ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಅಗ್ನಿ 5 ವಿಶೇಷತೆ ಏನು?
ಅಗ್ನಿ-5 ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ದು 5000ರಿಂದ 6000 ಕಿ.ಮೀ ದೂರದ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ತಂತ್ರಜ್ಞಾನದ ಕ್ಷಿಪಣಿ. 

ಈ ಕ್ಷಿಪಣಿಗೀಗ ಎಂಐಆರ್‌ವಿ ತಂತ್ರಜ್ಞಾನದ ಬಲ ನೀಡಲಾಗಿದೆ. ಅಂದರೆ ಈ ಕ್ಷಿಪಣಿ ಒಂದೇ ಸಮಯಕ್ಕೆ ಹಲವು ಸಿಡಿತಲೆಗಳನ್ನು ಹೊತ್ತೊಯ್ದು ಏಕಕಾಲಕ್ಕೆ10 ಗುರಿಗಳ ಮೇಲೆ ದಾಳಿ ನಡೆಸಬಲ್ಲದು. 

ಈ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ದೇಶೀಯ ಏವಿಯೋನಿಕ್ಸ್‌ ಮತ್ತು ಅತ್ಯಂತ ನಿಖರವಾದ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಅತ್ಯಂತ ನಿಖರ ದಾಳಿ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.

ಮಹಿಳಾ ಪಾರುಪತ್ಯ: ಈ ಯೋಜನೆಯ ಇನ್ನೊಂದು ವಿಶೇಷವೆಂದರೆ ಇದರ ಯೋಜನಾ ನಿರ್ದೇಶಕರು ಮಹಿಳೆಯಾಗಿದ್ದು, ಇಡೀ ಯೋಜನೆಗೆ ಹಲವು ಮಹಿಳಾ ವಿಜ್ಞಾನಿಗಳು ತಮ್ಮ ನೆರವು ನೀಡಿದ್ದಾರೆ.

ಏನಿದು ದಿವ್ಯಾಸ್ತ್ರ?
 5000 ಕಿ.ಮೀ. ದೂರ ಕ್ರಮಿಸಬಲ್ಲ ಅಗ್ನಿ-5 ಕ್ಷಿಪಣಿಗೆ ‘ಎಂಐಆರ್‌ವಿ’ ತಂತ್ರಜ್ಞಾನ ಬಳಕೆ. ಇದರಿಂದಾಗಿ ಒಂದೇ ಕ್ಷಿಪಣಿಗೆ ಹಲವಾರು ಅಣ್ವಸ್ತ್ರ ಸಿಡಿತಲೆ ಅಳವಡಿಸಿ ಉಡಾಯಿಸಬಹುದು.

ಪ್ರತಿ ಸಿಡಿತಲೆಗೂ ಒಂದೊದು ಗುರಿ, ವೇಗ ನಿಗದಿಪಡಿಸಿ ಏಕಕಾಲಕ್ಕೆ ದಾಳಿ ನಡೆಸಬಹುದು. ಹೀಗಾಗಿ ಒಂದೇ ಕ್ಷಿಪಣಿ ಬಳಸಿ ಶತ್ರುಪಡೆಗಳ ಹಲವು ತಾಣಗಳನ್ನು ಧ್ವಂಸ ಮಾಡಬಹುದು. ಈವರೆಗೆ ದೇಶದಲ್ಲಿ ಒಂದು ಕ್ಷಿಪಣಿಯಿಂದ ಒಂದೇ ಸಿಡಿತಲೆ ಬಳಸಲಾಗುತ್ತಿದೆ.

ಎಲ್ಲೆಲ್ಲಿದೆ? 
ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಹಾಗೂ ಚೀನಾ ಈ ತಂತ್ರಜ್ಞಾನ ಹೊಂದಿವೆ. ಅವುಗಳ ಸಾಲಿಗೆ ಈಗ ಭಾರತ ಸೇರ್ಪಡೆ. 

ವಿಜ್ಞಾನಿಗಳ ಸಾಧನೆ ಬಗ್ಗೆ ಹೆಮ್ಮೆ ಇದೆ: ಎಂಐಆರ್‌ವಿ ತಂತ್ರಜ್ಞಾನ ಒಳಗೊಂಡ ಸ್ವದೇಶಿ ಅಗ್ನಿ-5 ಕ್ಷಿಪಣಿಯ ಮೊದಲ ಉಡ್ಡಯನ ಯಶಸ್ವಿಯಾಗಿದೆ. ಮಿಷನ್‌ ದಿವ್ಯಾಸ್ತ್ರ ಕುರಿತ ಡಿಆರ್‌ಡಿಓ ವಿಜ್ಞಾನಿಗಳ ಸಾಧನೆ ಬಗ್ಗೆ ಹೆಮ್ಮೆ ಇದೆ. - ನರೇಂದ್ರ ಮೋದಿ, ಪ್ರಧಾನ ಮಂತ್ರಿ