ಯಾವ ಪಕ್ಷಕ್ಕೆ ಯಾರು ದಾನಿ, ಈಗ ತಿಳಿಯಲು ಸಾಧ್ಯ

| Published : Mar 22 2024, 01:05 AM IST / Updated: Mar 22 2024, 08:53 AM IST

ಸಾರಾಂಶ

ತನ್ನ ಬಳಿಯಿರುವ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಪಿಟಿಐ ನವದೆಹಲಿ

ತನ್ನ ಬಳಿಯಿರುವ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಅದರ ಬೆನ್ನಲ್ಲೇ ಆಯೋಗವು ಈ ಮಾಹಿತಿಯನ್ನು ತನ್ನ ವೆಬ್‌ಸೈಟ್‌ಗೆ ಹಾಕಿದ್ದು, ಯಾರಿಂದ ಯಾವ ಪಕ್ಷಕ್ಕೆ ಎಷ್ಟು ಹಣ ಸಂದಾಯವಾಗಿದೆ ಎಂಬ ನೇರ ಮಾಹಿತಿ ಬಹಿರಂಗವಾಗಿದೆ.

ಇತ್ತೀಚೆಗೆ ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್‌, ‘ಬಾಂಡ್‌ ಖರೀದಿದಾರರು ಹಾಗೂ ಪಕ್ಷಗಳಿಗೆ ಹರಿದುಬಂದ ದೇಣಿಗೆಯ ಮಾಹಿತಿಯನ್ನಷ್ಟೇ ನೀವು ನೀಡಿದ್ದೀರಿ. 

ನೇರವಾಗಿ ಯಾವ ಸಂಸ್ಥೆ/ವ್ಯಕ್ತಿಯೊಬ್ಬನಿಂದ ಯಾವ ಪಕ್ಷ ಎಷ್ಟು ಪಡೆದಿದೆ ಎಂಬ ಮಾಹಿತಿ ಇಲ್ಲ. ಅದನ್ನೂ ನೀಡಬೇಕು’ ಎಂದು ಆದೇಶಿಸಿತ್ತು.

ಈ ಪ್ರಕಾರ, ಬಾಂಡ್ ಖರೀದಿಸಿದವರ ಹೆಸರು, ಅದರ ಮುಖಬೆಲೆ ಮತ್ತು ನಿರ್ದಿಷ್ಟ ಸಂಖ್ಯೆ, ಅದನ್ನು ಎನ್‌ಕ್ಯಾಶ್ ಮಾಡಿದ ಪಕ್ಷದ ಹೆಸರು, ರಿಡೀಮ್ ಮಾಡಿದ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ತೋರಿಸುವ ಮಾಹಿತಿ ಹಾಗೂ ಎನ್‌ಕ್ಯಾಶ್ ಮಾಡಿದ ಬಾಂಡ್‌ನ ಮುಖಬೆಲೆ ಮತ್ತು ವಿಶಿಷ್ಟ ಸಂಖ್ಯೆಯನ್ನು ಗುರುವಾರ ಎಸ್‌ಬಿಐ, ಚುನಾವಣಾ ಆಯೋಗಕ್ಕೆ ನೀಡಿದೆ.

ಹೀಗಂತ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಎಸ್‌ಬಿಐ ಅಧ್ಯಕ್ಷ ಬ್ಯಾಂಕ್ ಅಧ್ಯಕ್ಷ ದಿನೇಶಕುಮಾರ ಖಾರಾ ಮಾಹಿತಿ ನೀಡಿದ್ದಾರೆ.

ಕೆವೈಸಿ, ಬ್ಯಾಂಕ್‌ ಖಾತೆ ಸಂಖ್ಯೆ ಬಹಿರಂಗವಿಲ್ಲ: ರಾಜಕೀಯ ಪಕ್ಷಗಳ ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕೆವೈಸಿ ವಿವರಗಳನ್ನು ಸೈಬರ್‌ ಭದ್ರತೆಯ ಕಾರಣ ಸಂಪೂರ್ಣ ಸಾರ್ವಜನಿಕ ಮಾಡಿಲ್ಲ. 

ಆದರೆ ರಾಜಕೀಯ ಪಕ್ಷಗಳು ಯಾವ ವ್ಯಕ್ತಿಯಿಂದ ಎಷ್ಟು ಹಣ ಪಡೆದವು ಎಂಬ ಮಾಹಿತಿ ಪಡೆಯಲು ಇವು ಅಗತ್ಯವಲ್ಲ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.

ಫೆ.15 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ, ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಅನಾಮಧೇಯ ರಾಜಕೀಯ ನಿಧಿಯನ್ನು ಅನುಮತಿಸುವ ಕೇಂದ್ರದ ವಿವಾದಾತ್ಮಕ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ‘ಅಸಾವಿಧಾನಿಕ’ ಎಂದು ಟೀಕಿಸಿ ರದ್ದುಗೊಳಿಸಿತ್ತು.

ದಾನಿಗಳು ನೀಡಿದ ಮೊತ್ತ ಹಾಗೂ ಪಕ್ಷಗಳು ಗಳಿಸಿದ ಬಾಂಡ್ ಆದಾಯವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಎಸ್‌ಬಿಐಗೆ ಆದೇಶಿಸಿತ್ತು. ಎಸ್‌ಬಿಐನಿಂದ ಪಡೆದ ಮಾಹಿತಿಯನ್ನು ವೆಬ್‌ಸೈಟ್‌ಗೆ ಹಾಕಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.