ಸಾರಾಂಶ
ತಿರುಪತಿ: ಬಡ ಜನರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಸಲುವಾಗಿ ತಿರುಮಲ ವೆಂಟೇಶ್ವರ ಸ್ವಾಮಿ ದೇವಾಲಯದ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿದ ಎಸ್.ವಿ. ಪ್ರಸಾದನ ಟ್ರಸ್ಟ್‌ಗೆ ಪಂಜಾಬ್ ಉದ್ಯಮಿಯೊಬ್ಬರು 21 ಕೋಟಿ ರು. ದೇಣಿಗೆ ನೀಡಿದ್ದಾರೆ.
ಕುಟುಂಬ ಸಮೇತರಾಗಿ ಆಗಮಿಸಿದ ರಾಜಿಂದರ್ ಗುಪ್ತಾ ಎಂಬ ಕೈಗಾರಿಕೋದ್ಯಮಿ ದೇಣಿಗೆ ಚೆಕ್ ಅನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಿದ್ದಾರೆ.ಟಿಟಿಡಿಯ ಎಸ್‌ವಿ ಪ್ರಾಣದಾನ ಟ್ರಸ್ಟ್ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ. ರಾಜಿಂದರ್ ಗುಪ್ತಾ ಅವರು ಟ್ರಸ್ಟ್‌ಗೆ 21 ಕೋಟಿ ರು. ದೇಣಿಗೆ ನೀಡಿದ್ದಾರೆ ಎಂದು ದೇಗುಲದ ಆಡಳಿತ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
==ರಷ್ಯಾದ 1000 ಚಕಿಮೀ ನಮ್ಮ ವಶಕ್ಕೆ: ಉಕ್ರೇನ್
ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮಹತ್ವದ ತಿರುವು ಪಡೆದುಕೊಂಡಿದೆ. ರಷ್ಯಾದ 1000 ಚ.ಕಿ.ಮೀ. ಭಾಗವನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಉಕ್ರೇನ್ ಸೇನಾ ಕಮಾಂಡರ್ ಸೋಮವಾರ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಕೂಡ ಮೊದಲ ಸಲ ಇದನ್ನು ದೃಢಪಡಿಸಿದ್ದು, ರಷ್ಯಾದ ಕುಸ್ಕ್ ಪ್ರದೇಶದಲ್ಲಿ ಉಕ್ರೇನ್ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಕಳೆದ 2 ದಿನದಿಂದ ಈ ವಲಯದಲ್ಲಿ ಸಂಘರ್ಷ ನಡೆದಿದೆ.==
ಪಾಕ್ ಐಎಸ್‌ಐ ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಬಂಧನಇಸ್ಲಾಮಾಬಾದ್: ಪಾಕಿಸ್ತಾನದ ಪ್ರಬಲ ಗುಪ್ತಚರ ಸಂಸ್ಥೆ ಐಎಸ್‌ಐ ಮಾಜಿ ಮುಖ್ಯಸ್ಥ ನಿವೃತ್ತ ಲೆ।ಜ। ಫೈಜ್ ಹಮೀದ್ ಅವರನ್ನು ಪಾಕಿಸ್ತಾನ ಸೇನೆ ಸೋಮವಾರ ಬಂಧಿಸಿದೆ.ವಸತಿ ಯೋಜನೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಹಮೀದ್ ವಿರುದ್ಧ ದಾಖಲಾದ ದೂರಿನ ಅನ್ವಯ ಅವರನ್ನು ಬಂಧಿಸಿ ಸೇನಾ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಹಮೀದ್ ವಿರುದ್ಧ ದಾಖಲಾದ ಟಾಪ್ ಸಿಟಿ ವಸತಿ ಯೋಜನೆ ದೂರುಗಳ ಬಗ್ಗೆ ನಿಖರತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಪಾಕಿಸ್ತಾನ ಸೇನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಸೇನಾ ಮಾಧ್ಯಮ ವಿಭಾಗ ತಿಳಿಸಿದೆ.2023ರ ನ.8 ರಂದು ಹಮೀದ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು. ಐಎಎಸ್‌ಐ ಅಧಿಕಾರಿಗಳನ್ನು ಟಾಪ್ ಸಿಟಿ ಕಚೇರಿಗೆ ಕಳಿಸಿ ಚಿನ್ನ, ವಜ್ರ, ಹಣ, ದಾಖಲಾತಿ ಜಪ್ತಿ ಮಾಡಿದ್ದರು ಎಂದು ಟಾಪ್ ಸಿಟಿ ಮಾಲೀಕ ಮೊಯೀಜ್ ಅಹ್ಮದ್ ಖಾನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಹಮೀದ್ 2019 ರಿಂದ 2021 ರವರೆಗೆ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥರಾಗಿದ್ದರು.
==ಜಿಲ್ಲೆಗೊಂದು ಮಾದರಿ ಸೌರ ಗ್ರಾಮ ಅಭಿವೃದ್ಧಿ
ನವದೆಹಲಿ: ಗ್ರಾಮಗಳು ತಮ್ಮ ಇಂಧನ ಅಗತ್ಯವನ್ನು ಸ್ವಯಂ ಈಡೇರಿಸಿಕೊಳ್ಳುವ ಮೂಲಕ ಆತ್ಮನಿರ್ಭರತೆ ಸಾಧಿಸಲು ನೆರವಾಗಲು ರೂಪಿಸಲಾಗಿರುವ ಪಿಎಂ - ಸೂರ್ಯ ಘರ್: ಮುಫ್ತ್ ಬಿಜಲಿ ಯೋಜನೆಯ ನಿರ್ವಹಣಾ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.ಈ ಯೋಜನೆಯಡಿ ಮೊದಲ ಹಂತದಲ್ಲಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ತಲಾ ಒಂದು ಗ್ರಾಮವನ್ನು ಮಾದರಿ ಸೌರ ಗ್ರಾಮವಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ತಲಾ 1 ಕೋಟಿ ರು.ಗಳಂತೆ ಮೊದಲ ಹಂತದಲ್ಲಿ 800 ಕೋಟಿ ರು. ವಿನಿಯೋಗಿಸಲಾಗುವುದು ಎಂದು ಹೊಸ ಮತ್ತು ನವೀಕರೀಸಬಹುದಾದ ಇಂಧನಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಜಿಲ್ಲಾ ಮಟ್ಟದ ಸಮಿತಿಗಳು ಸಂಭವನೀಯ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳುತ್ತವೆ. ಇಂಥ ಗ್ರಾಮಗಳು ಕನಿಷ್ಠ 5000 ಜನಸಂಖ್ಯೆ ಹೊಂದಿರಬೇಕಾಗುತ್ತದೆ (ವಿಶೇಷ ರಾಜ್ಯಗಳಿಗೆ 2000 ಜನಸಂಖ್ಯೆ ಮಿತಿ). ಬಳಿಕ ಇವುಗಳ ನಡುವಿನ ಸ್ಪರ್ಧೆಯ ಬಳಿಕ ಅಂತಿಮ ಮಾದರಿ ಗ್ರಾಮವನ್ನು ಆಯ್ಕೆ ಮಾಡಲಾಗುತ್ತದೆ. ಗ್ರಾಮಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ ಅದರಿಂದಲೇ ವಿದ್ಯುತ್ ವಿತರಿಸಲಾಗುತ್ತದೆ.ಯೋಜನೆ ಜಾರಿಯ ಹೊಣೆಯನ್ನು ರಾಜ್ಯಗಳ ನವೀಕರಿಸಬಹುದಾದ ಇಂಧನಗಳ ಸಚಿವಾಲಯಗಳು ನಿರ್ವಹಿಸುತ್ತವೆ. ಈ ಮೂಲಕ ಈ ಮಾದರಿ ಗ್ರಾಮಗಳು ದೇಶದ ಇತರೆ ಗ್ರಾಮಗಳಿಗೆ ಈ ಯೋಜನೆಯನ್ನು ಜಾರಿಗೆ ತರಲು ಮಾದರಿಯಾಗಿ ಹೊರಹೊಮ್ಮುವಂತೆ ನೋಡಿಕೊಳ್ಳುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.2024ರ ಫೆ.29ರಂದು ಕೇಂದ್ರ ಸರ್ಕಾರ ಪಿಎಂ - ಸೂರ್ಯ ಘರ್: ಮುಫ್ತ್ ಬಿಜಲಿ ಘೋಷಣೆ ಮಾಡಿತ್ತು. 2026-27ರ ವೇಳೆಗೆ ಈ ಯೋಜನೆಗಾಗಿ 75021 ಕೋಟಿ ರು. ವಿನಿಯೋಗ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
==ಹೆದ್ದಾರಿಗಳು ಪಾರ್ಕಿಂಗ್ ತಾಣವಲ್ಲ: ಸುಪ್ರೀಂ
ನವದೆಹಲಿ: ‘ಹೆದ್ದಾರಿಗಳು ವಾಹನ ನಿಲುಗಡೆ ಮಾಡಲು ಇರುವ ಜಾಗಗಳಲ್ಲ’ ಎಂದಿರುವ ಸುಪ್ರೀಂ ಕೋರ್ಟ್, ದೆಹಲಿಯ ಶಂಭು ಗಡಿ ಹೆದ್ದಾರಿ ಮೇಲೆ ಪ್ರತಿಭಟನಾರ್ಥವಾಗಿ ನಿಲ್ಲಿಸಿರುವ ಟ್ರ್ಯಾಕ್ಟರ್‌ಗಳನ್ನು ತೆರವುಗೊಳಿಸುವಂತೆ ಪ್ರತಿಭಟನಾನಿರತ ರೈತರ ಮನವೊಲಿಸಲು ಪಂಜಾಬ್ ಹಾಗೂ ಹರ್ಯಾಣ ಸರ್ಕಾರಕ್ಕೆ ಆದೇಶಿಸಿದೆ.ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಫೆ.13ರಿಂದ ಶಂಭು ಗಡಿಯಲ್ಲಿ ರೈತರು ಬೀಡು ಬಿಟ್ಟಿದ್ದು, ಹೈವೇಗಳಲ್ಲಿ ಟ್ರಾಕ್ಟರ್ ನಿಲ್ಲಿಸಿಕೊಂಡಿದ್ದಾರೆ. ಹೀಗಾಗಿ ಅವನ್ನು ಅಲ್ಲಿಂದ ತೆರವುಗೊಳಿಸುವ ಕುರಿತು ಉಭಯ ರಾಜ್ಯ ಸರ್ಕಾರಗಳು ಪಟಿಯಾಲಾ ಹಾಗೂ ಅಂಬಾಲಾ ಎಸ್ಪಿಗಳ ಜತೆಗೂಡಿ ರೈತರ ಮನವೊಲಿಸಬೇಕು ಎಂದಿದೆ.
ಆ್ಯಂಬುಲೆನ್ಸ್‌ನಂತ ಅಗತ್ಯ ಸೇವೆ, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಸಂಚಾರಕ್ಕೆ ಅನುಕೂಲವಾಗುವಂತೆ ಶಂಭು ಗಡಿಯನ್ನು ಭಾಗಶಃ ತೆರೆಯುವಂತೆ ನ್ಯಾ। ಸೂರ್ಯಕಾಂತ್ ಮತ್ತು ಉಜ್ಜಲ್ ಭೂಷಣ್ ಅವರ ಪೀಠ ಹೇಳಿದ್ದು, ಪ್ರತಿಭಟನೆಯಲ್ಲಿ ತೊಡಗಿರುವ ರೈತರೊಂದಿಗೆ ಮಾತುಕತೆ ನಡೆಸಲು ರಚಿಸಲಾದ ಸಮಿತಿಗೆ ರಾಜಕೀಯದಲ್ಲಿ ತೊಡಗಿರದ ತಟಸ್ಥ ಮನಸ್ಕ ವ್ಯಕ್ತಿಗಳನ್ನು ಸೂಚಿಸಿದ ಸರ್ಕಾರದ ನಡೆಯನ್ನು ಶ್ಲಾಘಿಸಿದೆ.ಶಂಭು ಗಡಿಯಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹರ್ಯಾಣ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಹೀಗೆ ಹೇಳಿದೆ.