ಸಾರಾಂಶ
ನವದೆಹಲಿ: ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 48 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 7, ತೃಣಮೂಲ ಕಾಂಗ್ರೆಸ್(ಟಿಎಂಸಿ) 6, ಸಮಾಜವಾದಿ ಪಕ್ಷ (ಎಸ್‌ಪಿ) 3 ಹಾಗೂ ಆಪ್ 3 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
ಪ್ರಮುಖವಾಗಿ ಉತ್ತರಪ್ರದೇಶದ 9 ಕ್ಷೇತ್ರಗಳಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಗೆದ್ದಿದ್ದರೆ, ಎಸ್‌ಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ರಾಜ್ಯಸ್ಥಾನದ 7 ಕ್ಷೇತ್ರಗಳಲ್ಲಿ ಬಿಜೆಪಿ 5 ಸ್ಥಾನ, ಕಾಂಗ್ರೆಸ್ ಮತ್ತು ಭಾರತ್ ಆದಿವಾಸಿ ಪಕ್ಷ ತಲಾ 1 ಸ್ಥಾನದಲ್ಲಿ ಜಯ ಸಾಧಿಸಿದೆ.
ಪ. ಬಂಗಾಳದಲ್ಲಿ 6ಕ್ಕೆ 6 ಸ್ಥಾನಗಳನ್ನು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕರ್ನಾಟಕದ ಕಾಂಗ್ರೆಸ್ 3 ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ತೋರಿಸಿ 3ರಲ್ಲೂ ಜಯಸಾಧಿಸಿದೆ.
ಅಸ್ಸಾಂನ 5 ಕ್ಷೇತ್ರಗಳಲ್ಲಿ ಬಿಜೆಪಿ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನೆರಡು ಕ್ಷೇತ್ರಗಳು ಸ್ಥಳೀಯ ಪಕ್ಷಗಳ ಪಾಲಾಗಿವೆ.
ಪಂಜಾಬ್‌ನ 4 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ಆಪ್ ಹಾಗೂ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಇನ್ನು ಬಿಹಾರದ 4 ಕ್ಷೇತ್ರಗಳಲ್ಲಿ ಬಿಜೆಪಿ 2, ಜೆಡಿಯು ಹಾಗೂ ಹಮ್ ಪಕ್ಷ ತಲಾ 1 ಸ್ಥಾನದಲ್ಲಿ ಜಯಗಳಿಸಿದೆ.
ಕೇರಳದ 2 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಸಿಪಿಎಂ ತಲಾ ಒಂದು ಕ್ಷೇತ್ರದಲ್ಲಿ ಗೆದ್ದಿವೆ. ಹಾಗೆಯೇ ಮಧ್ಯಪ್ರದೇಶದಲ್ಲಿ 2 ಸ್ಥಾನಗಳ ಉಪಚುನಾವಣೆಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಒಂದು ಕ್ಷೇತ್ರವನ್ನು ಕೈವಶ ಮಾಡಿಕೊಂಡಿವೆ.
ಯುಪಿ: 11 ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿ ಗೆದ್ದ ಬಿಜೆಪಿಯ ಹಿಂದೂ ಅಭ್ಯರ್ಥಿ
ಲಖನೌ: ಉತ್ತರಪ್ರದೇಶದ ಕುಂದರ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಕೈಕ ಹಿಂದೂ ಅಭ್ಯರ್ಥಿ, ಬಿಜೆಪಿ ರಾಮ್‌ವೀರ್ ಠಾಕೂರ್ 11 ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿ ಗೆಲುವು ಪಡೆದಿದ್ದಾರೆ. ಅವರು 1.44 ಲಕ್ಷ ಮತದಿಂದ ಗೆದ್ದಿದ್ದಾರೆ. ಕುಂದರ್ಕಿ ಸಮಾಜವಾದಿ ಪಕ್ಷದ ಭದ್ರಕೋಟೆ. ಜೊತೆಗೆ ಮುಸ್ಲಿಂ ಬಾಹುಳ್ಯವುಳ್ಳ ಈ ಕ್ಷೇತ್ರವಾಗಿದ್ದರೂ ಕೂಡ ಎದುರಾಳಿ ಅಭ್ಯರ್ಥಿಗಳನ್ನು ಸೋಲಿಸಿ ಠಾಕೂರ್ ಜಯ ಸಾಧಿಸಿದ್ದಾರೆ. ಈ ಮೂಲಕ 30 ವರ್ಷಗಳ ಬಳಿಕ ಕುಂದರ್ಕಿ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ಮರಳಿ ಪಡೆದುಕೊಂಡಿದೆ.