ಧರ್ಮಗ್ರಂಥಕ್ಕೆ ಅಪಚಾರ ಮಾಡಿದರೆ ಪಂಜಾಬ್‌ನಲ್ಲಿ ಗಲ್ಲು ಶಿಕ್ಷೆ?

| N/A | Published : Jul 06 2025, 11:48 PM IST / Updated: Jul 07 2025, 05:46 AM IST

ಧರ್ಮಗ್ರಂಥಕ್ಕೆ ಅಪಚಾರ ಮಾಡಿದರೆ ಪಂಜಾಬ್‌ನಲ್ಲಿ ಗಲ್ಲು ಶಿಕ್ಷೆ?
Share this Article
  • FB
  • TW
  • Linkdin
  • Email

ಸಾರಾಂಶ

ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್‌ಗೆ ಅಪಚಾರವೆಸಗುವ ಘಟನೆಗಳು ಪದೇ ಪದೇ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಪಂಜಾಬ್ ಸರ್ಕಾರವು ಧರ್ಮಗ್ರಂಥಗಳಿಗೆ ಹಾನಿ ಮಾಡುವ ಅಪರಾಧಿಗಳಿಗೆ ಜೀವಾವಧಿ ಅಥವಾ ಗಲ್ಲುಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ.

ಚಂಡೀಗಢ: ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್‌ಗೆ ಅಪಚಾರವೆಸಗುವ ಘಟನೆಗಳು ಪದೇ ಪದೇ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಪಂಜಾಬ್ ಸರ್ಕಾರವು ಧರ್ಮಗ್ರಂಥಗಳಿಗೆ ಹಾನಿ ಮಾಡುವ ಅಪರಾಧಿಗಳಿಗೆ ಜೀವಾವಧಿ ಅಥವಾ ಗಲ್ಲುಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಇದಕ್ಕಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದು, ಶಿಕ್ಷೆಯ ಪ್ರಮಾಣದ ಕುರಿತು ಜು.7ರಂದು ನಡೆವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದೆ. ಜೊತೆಗೆ ಈ ನಿರ್ಧಾರ ಒಳಗೊಂಡ ಮಸೂದೆಯನ್ನು ಜು.10 ಮತ್ತು 11ರಂದು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.

‘ಧರ್ಮಗ್ರಂಥಕ್ಕೆ ಅಪಚಾರವೆಸಗಿದವರಿಗೆ ಗಲ್ಲುಶಿಕ್ಷೆ ವಿಧಿಸುವ ಕಠಿಣ ಕಾನೂನು ತರಲು ಜು.10 ಮತ್ತು 11ರಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದ್ದೇವೆ. ಕೇಂದ್ರ ಸರ್ಕಾರ ಇದನ್ನು ಮಾಡಬೇಕಾಗಿತ್ತು. ಆದರೆ ಆಮ್ ಆದ್ಮಿ (ಎಎಪಿ) ಸರ್ಕಾರವು ರಾಜ್ಯದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಪಂಜಾಬ್‌ನಲ್ಲಿ ಇದನ್ನು ಮಾಡುತ್ತಿದೆ’ ಎಂದು ಎಎಪಿ ವಕ್ತಾರ ನೀಲ್ ಗಾರ್ಗ್ ಹೇಳಿದ್ದಾರೆ.

2016ರಲ್ಲಿ, ಆಗಿನ ಎಸ್ಎಡಿ-ಬಿಜೆಪಿ ಸರ್ಕಾರ ಗುರುಗ್ರಂಥ ಸಾಹಿಬ್‌ಗೆ ಅಪಚಾರವೆಸಿದವರಿಗೆ ಜೀವಾವಧಿ ಶಿಕ್ಷೆಯನ್ನು ಶಿಫಾರಸು ಮಾಡುವ 2 ಮಸೂದೆಗಳನ್ನು ತಂದಿತ್ತು. ಆದರೆ ಕೇಂದ್ರ ಸರ್ಕಾರ, ಸಂವಿಧಾನ ಪ್ರಕಾರ ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ಸಿಖ್ಖರಿಗೆ ಮಾತ್ರ ಈ ಕಾನೂನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಮಸೂದೆಯನ್ನು ಹಿಂದೆ ಕಳಿಸಿತ್ತು. 2018ರಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ 2 ಮಸೂದೆಗಳೂ ರಾಷ್ಟ್ರಪತಿ ಅಂಕಿತ ಪಡೆಯುವಲ್ಲಿ ವಿಫಲವಾಗಿದ್ದವು. ಇದೀಗ ಮತ್ತೆ ಈ ಕಾನೂನಿನ ಜಾರಿಗೆ ಪಂಜಾಬ್ ಸರ್ಕಾರ ಮುಂದಾಗಿದೆ.

Read more Articles on