ಇಂದು ಕರ್ತವ್ಯಪಥದಲ್ಲಿ 76ನೇ ಗಣರಾಜ್ಯೋತ್ಸವ ಮುಖ್ಯ ಸಮಾರಂಭ : ಪಥಸಂಚಲನ, ಸ್ತಬ್ಧಚಿತ್ರ ಹಾಗೂ ವೈಮಾನಿಕ ಪ್ರದರ್ಶನ

| N/A | Published : Jan 26 2025, 01:32 AM IST / Updated: Jan 26 2025, 04:53 AM IST

India Flag stock
ಇಂದು ಕರ್ತವ್ಯಪಥದಲ್ಲಿ 76ನೇ ಗಣರಾಜ್ಯೋತ್ಸವ ಮುಖ್ಯ ಸಮಾರಂಭ : ಪಥಸಂಚಲನ, ಸ್ತಬ್ಧಚಿತ್ರ ಹಾಗೂ ವೈಮಾನಿಕ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವು ಭಾನುವಾರ ತನ್ನ 76ನೇ ಗಣರಾಜ್ಯೋತ್ಸವದ ಆಚರಣೆಗೆ ಸಿದ್ಧವಾಗಿದೆ. ಈ ನಿಮಿತ್ತ ದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುವ ಮುಖ್ಯ ಸಮಾರಂಭದಲ್ಲಿ ವೈಭವದ ಪಥಸಂಚಲನ, ಸ್ತಬ್ಧಚಿತ್ರ ಪ್ರದರ್ಶನ ಹಾಗೂ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ.  

 ನವದೆಹಲಿ : ಭಾರತವು ಭಾನುವಾರ ತನ್ನ 76ನೇ ಗಣರಾಜ್ಯೋತ್ಸವದ ಆಚರಣೆಗೆ ಸಿದ್ಧವಾಗಿದೆ. ಈ ನಿಮಿತ್ತ ದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುವ ಮುಖ್ಯ ಸಮಾರಂಭದಲ್ಲಿ ವೈಭವದ ಪಥಸಂಚಲನ, ಸ್ತಬ್ಧಚಿತ್ರ ಪ್ರದರ್ಶನ ಹಾಗೂ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ. ಸಮಾರಂಭವು ದೇಶದ ಅಭಿವೃದ್ಧಿ, ಪರಂಪರೆಯ ಸ್ಮಣೆ ಜತೆ ‘ಜನ ಭಾಗೀದಾರಿಕೆಗೆ’ (ಜನಸಾಮಾನ್ಯರ ಭಾಗವಹಿಸುವಿಕೆ) ಒತ್ತು ನೀಡಲಿದ್ದು, ಸಂವಿಧಾನ ಜಾರಿಗೆ ಬಂದ ಅಮೃತ ಮಹೋತ್ಸವವನ್ನು ಸ್ಮರಿಸಲಿದೆ.

ಗಣರಾಜ್ಯೋತ್ಸವವು 1950ರ ಜ, 26ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸ್ಮರಣಾರ್ಥ ದಿನವಾಗಿದೆ.ಈ ಸಲದ ಗಣರಾಜ್ಯೋತ್ಸವ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಆಗಮಿಸಿದ್ದಾರೆ. ಪರೇಡ್‌ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದೇಶದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.ಈ ಸಲದ ಗಣರಾಜ್ಯೋತ್ಸವ ಜನ್ ಭಾಗಿದರಿ (ಜನರ ಭಾಗವಹಿಸುವಿಕೆ) ವಿಷಯದ ಮೇಲೆ ವಿಶೇಷ ಗಮನ ಹರಿಸಿದೆ. ಸಾವಿರಾರು ಜನಸಾಮಾನ್ಯರನ್ನು ವಿಶೇಷ ಅತಿಥಿಗಳೆಂದು ಆಹ್ವಾನಿಸಲಾಗಿದ್ದು, ಒಟ್ಟು 10 ಸಾವಿರ ಜನ ಭಾಗಿಯಾಗಲಿದ್ದಾರೆ.

ಮುಖ್ಯ ಮೆರವಣಿಗೆಯು ಭಾನುವಾರ ಬೆಳಿಗ್ಗೆ 10.30ಕ್ಕೆ ವಿಜಯ್ ಚೌಕ್‌ನಲ್ಲಿ ಪ್ರಾರಂಭವಾಗುತ್ತದೆ, ಕರ್ತವ್ಯ ಪಥದಲ್ಲಿ ಮುಂದುವರಿಯುತ್ತದೆ ಹಾಗೂ ಇಂಡಿಯಾ ಗೇಟ್ ಮೂಲಕ ಹಾದುಹೋಗುತ್ತದೆ ಮತ್ತು ಕೆಂಪು ಕೋಟೆಯಲ್ಲಿ ಮುಕ್ತಾಯಗೊಳ್ಳುತ್ತದೆ.

ಸುವರ್ಣ ಭಾರತ ಥೀಮ್‌:

ಈ ಸಲದ ಪರೇಡ್‌ನ ವಿಷಯವೆಂದರೆ ‘ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’ (ಸುವರ್ಣ ಭಾರತ: ಪರಂಪರೆ ಮತ್ತು ಅಭಿವೃದ್ಧಿ). ಭಾರತೀಯ ಸಂವಿಧಾನವನ್ನು ಜಾರಿಗೆ ಬಂದ 75 ವರ್ಷಗಳು ಪೂರ್ಣಗೊಂಡ ನಿಮಿತ್ತ ಈ ಹೆಸರಿಡಲಾಗಿದೆ.ಸಂವಿಧಾನದ 75 ವರ್ಷಗಳನ್ನು ಗುರುತಿಸುವ ಅಧಿಕೃತ ಲಾಂಛನವನ್ನು ಹೊಂದಿರುವ ಬಲೂನ್‌ಗಳನ್ನು ಹಾರಿಸಲಾಗುತ್ತದೆ.

31 ಸ್ತಬ್ಧಚಿತ್ರ:ಕರ್ನಾಟಕ ಸೇರಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ತಮ್ಮ ತಮ್ಮ ವಲಯಗಳನ್ನು ಆಧರಿಸಿ ವಿಶಿಷ್ಟ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಿವೆ. ಒಟ್ಟು 31 ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಲಿದೆ.

10 ಸಾವಿರ ಅತಿಥಿಗಳು:ಸರಪಂಚ್‌ಗಳು, ವಿಪತ್ತು ಪರಿಹಾರ ಕಾರ್ಯಕರ್ತರು, ಜಲ ಯೋಧರು, ಕುಶಲಕರ್ಮಿಗಳು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ 34 ವಿಭಾಗಗಳಲ್ಲಿ ಸುಮಾರು 10,000 ವ್ಯಕ್ತಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಅವರ ಕೊಡುಗೆಗಳನ್ನು ಗೌರವಿಸಲಾಗುತ್ತದೆ.

5 ಸಾವಿರ ಕಲಾವಿದರು:ಗಣರಾಜ್ಯೋತ್ಸವದ ಮೆರವಣಿಗೆಯು 300 ಸಾಂಸ್ಕೃತಿಕ ಕಲಾವಿದರು ದೇಶೀಯ ವಾದ್ಯಗಳ ಮೂಲಕ ‘ಸಾರೆ ಜಹಾನ್ ಸೆ ಅಚ್ಛಾ’ ನುಡಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಸಂಸ್ಕೃತಿ ಸಚಿವಾಲಯವು ಭಾರತದಾದ್ಯಂತ 45 ಸಾಂಪ್ರದಾಯಿಕ ನೃತ್ಯ ಪ್ರಾಕಾರಗಳನ್ನು ಒಳಗೊಂಡ 5,000 ಕಲಾವಿದರೊಂದಿಗೆ 11 ನಿಮಿಷಗಳ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತದೆ.

ಸೇನಾ ಪರೇಡ್‌:ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್ ಯುದ್ಧ ವೀರರು ಹಾಗೂ ಒಬ್ಬ ಅಶೋಕ ಚಕ್ರ ಪುರಸ್ಕೃತರು ಪರೇಡ್‌ನ ಭಾಗವಾಗಲಿದ್ದಾರೆ. ಪರೇಡ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ತುಕಡಿಗಳ ಜತೆ ಇಂಡೋನೇಷ್ಯಾದ 160 ಸದಸ್ಯರ ಕವಾಯತು ತಂಡ ಮತ್ತು 190 ಸದಸ್ಯರ ಬ್ಯಾಂಡ್ ತಂಡಗಳೂ ಭಾಗಿಯಾಗಲಿವೆ.ಸಿ-130ಜೆ ಸೂಪರ್ ಹರ್ಕ್ಯುಲಸ್, ಸಿ-295, ಸಿ-17 ಗ್ಲೋಬ್‌ಮಾಸ್ಟರ್, ಪಿ-8ಐ, ಮಿಗ್‌-29 ಮತ್ತು ಸುಖೋಯ್‌-30, ಇತರ ವಿಮಾನಗಳ ಪ್ರದರ್ಶನ ನಡೆಯಲಿದೆ. ಫ್ಲೈಪಾಸ್ಟ್‌ನಲ್ಲಿ ಭಾರತೀಯ ವಾಯುಪಡೆಯ 40 ವಿಮಾನಗಳು ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ನ 3 ಡಾರ್ನಿಯರ್ ವಿಮಾನಗಳು ಭಾಗಿಯಾಗಲಿವೆ.

ಏಕ ಚುನಾವಣೆಗೆ ರಾಷ್ಟ್ರಪತಿ ಬೆಂಬಲ

ನವದೆಹಲಿ: ದೇಶದಲ್ಲಿ ಬಹು ಚರ್ಚೆಯಲ್ಲಿರುವ ‘ಒಂದು ರಾಷ್ಟ್ರ ಒಂದು ಚುನಾವಣೆ’ ವ್ಯವಸ್ಥೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಬೆಂಬಲ ಸೂಚಿಸಿದ್ದಾರೆ.76ನೇ ಗಣರಾಜ್ಯೋತ್ಸವದ ಪ್ರಯುಕ್ತ ಅದರ ಮುನ್ನಾದಿನ ಮಾತನಾಡಿದ ಮುರ್ಮು, ‘ದೇಶದಲ್ಲಿ ಆಡಳಿತ ಸ್ಥಿರತೆ, ಸಂಪನ್ಮೂಗಳ ವಿಭಜನೆ ತಡೆಗಟ್ಟುವಿಕೆ, ದೇಶದ ಮೇಲಿನ ಆರ್ಥಿಕ ಹೊರೆ ತಗ್ಗಿಸುವ ಮೂಲಕ ಉತ್ತಮ ಆಡಳಿತ ಒದಗಿಸಲು ಒಂದು ದೇಶ ಒಂದು ಚುನಾವಣೆ ಅಗತ್ಯ’ ಎಂದರು.

ಈ ವೇಳೆ, ಬ್ರಿಟಿಷ್‌ ಕಾಲದ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾನೂನು ಬದಲಿಸಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮಗಳ ಉದಾಹರಣೆ ನೀಡುತ್ತಾ ದಶಕಗಳಿಂದ ನಡೆದುಬಂದಿರುವ ವಸಾಹತುಶಾಹಿ ಆಚರಣೆ ಹಾಗೂ ಕುರುಹುಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನವನ್ನು ಮುರ್ಮು ಶ್ಲಾಘಿಸಿದರು. 

ಅಂತೆಯೇ, ಸಂವಿದಾನದ ಮಹತ್ವವನ್ನು ಸಾರುತ್ತಾ, ಕಳೆದ 75 ವರ್ಷಗಳಲ್ಲಿ ಸಾಧಿಸಿದ ಪ್ರಗತಿಯನ್ನು ವರ್ಣಿಸಿದರು.‘ಭಾರತದ ಆರ್ಥಿಕತೆಯು ಇಂದು ಜಾಗತಿಕ ಮಟ್ಟದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇದು ಸಂವಿದಾನ ಹಾಗೂ ರೈತರು, ಕಾರ್ಮಿಕರಿಂದ ಸಾಧ್ಯವಾಗಿದೆ’ ಎಂದು ಮುರ್ಮು ಆರ್ಥಿಕ ಬೆಳವಣಿಗೆಯನ್ನು ಪ್ರಶಂಸಿಸಿದರು. ದೇಶದಲ್ಲಿ ಹಿಂದುಳಿದ ವರ್ಗದವರನ್ನು ಬೆಂಬಲಿಸುತ್ತಿರುವ ಬಗೆ ಹಾಗೂ ಮಹಿಳೆಯರ ಪ್ರಾತಿನಿಧ್ಯದಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ವಿವರಿಸಿದರು.

ಗಣರಾಜ್ಯೋತ್ಸವ: 942 ಪೊಲೀಸರಿಗೆ ಶೌರ್ಯ, ಸೇವಾ ಪದಕ

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ 942 ಪೊಲೀಸರಿಗೆ ಪದಕ ಘೋಷಣೆಯಾಗಿದೆ. ಈ ಪೈಕಿ 95 ಶೌರ್ಯ ಪದಕ, 101 ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪದಕ, 746 ಸಾರ್ಥಕ ಸೇವೆ ಸಲ್ಲಿಸವರಿಗೆ ಪ್ರತಿಭಾವಂತ ಪದಕ ಘೋಷಿಸಲಾಗಿದೆ. 95 ಶೌರ್ಯ ಪದಕದಲ್ಲಿ 28 ನಕ್ಸಲ್‌ ಪ್ರದೇಶದಲ್ಲಿ, 28 ಪದಕ ಜಮ್ಮು ಕಾಶ್ಮೀರ ಭಾಗದಲ್ಲಿ, ಈಶಾನ್ಯ ಭಾಗಕ್ಕೆ 3 ಮತ್ತು 36 ಪದಕಗಳನ್ನು ದೇಶದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದವರಿಗೆ ಘೋಷಿಸಲಾಗಿದೆ. ಉಳಿದಂತೆ 101 ಜನರಿಗೆ ವಿಶಿಷ್ಟ ಸೇವಾ ಪದಕ, 746 ಜನರಿಗೆ ಸಾರ್ಥಕ ಪದಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಇಬ್ಬರು ವೀರ ಸೇನಾನಿಗಳಿಗೆ ಕೀರ್ತಿ ಚಕ್ರ

ನವದೆಹಲಿ: ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಶೌರ್ಯ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. 11 ಮರಣೋತ್ತರ ಸೇರಿದಂತೆ 93 ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ.

ಇವುಗಳಲ್ಲಿ ಒಂದು ಮರಣೋತ್ತರ ಸೇರಿದಂತೆ 2 ಕೀರ್ತಿ ಚಕ್ರಗಳು ಸೇರಿವೆ. 3 ಮರಣೋತ್ತರ ಸೇರಿದಂತೆ 14 ಶೌರ್ಯ ಚಕ್ರಗಳು, 1 ಸೇನಾ (ಬಾರ್) ಪದಕ, 7 ಮರಣೋತ್ತರ ಸೇರಿದಂತೆ 66 ಸೇನಾ ಪದಕಗಳು; 2 ನೌಕಾ ಸೇನಾ ಪದಕ ಮತ್ತು 8 ವಾಯು ಸೇನಾ ಪದಕಗಳು (ಶೌರ್ಯ) ಸೇರಿವೆ.

ಸೇನೆಯ ಮೇ। ಮಂಜಿತ್ ಹಾಗೂ ಉಗ್ರರ ವಿರುದ್ಧ ಹೋರಾಡಿ ಮಡಿದ ನಾಯಕ್ ದಿಲ್ವಾರ್ ಖಾನ್ (ಮರಣೋತ್ತರ) ಕೀರ್ತಿ ಚಕ್ರ ಪಡೆದಿದ್ದಾರೆ,ಉಗ್ರರ ವಿರುದ್ಧ ಹೋರಾಡಿದ್ದ ವಾಯುಪಡೆ ಯೋಧ ಸಂಜಯ್ ಹಿಫ್ಫಾಬಾಯಿ ಎಸ್ಸಾ ಸೇರಿ 14 ಮಂದಿ ಶೌರ್ಯಚಕ್ರ ಘೋಷಿಸಿದ್ದಾರೆ.