ನಟಿಯರ ಕಾರವಾನ್‌ಗಳಲ್ಲಿ ರಹಸ್ಯ ಕ್ಯಾಮೆರಾ: ಹಿರಿಯ ನಟಿ ರಾಧಿಕಾ ಶರತ್‌ಕುಮಾರ್‌ ಆರೋಪ

| Published : Sep 01 2024, 01:48 AM IST / Updated: Sep 01 2024, 04:50 AM IST

ಸಾರಾಂಶ

ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಕಾರ್‌ವಾನ್‌ಗಳಲ್ಲಿ ರಹಸ್ಯ ಕ್ಯಾಮೆರಾ ಇರಿಸಲಾಗುತ್ತಿತ್ತು ಎಂದು ಹಿರಿಯ ನಟಿ ರಾಧಿಕಾ ಶರತ್‌ಕುಮಾರ್‌ ಆರೋಪಿಸಿದ್ದಾರೆ. ಈ ಕುರಿತು ನ್ಯಾ। ಹೇಮಾ ವರದಿ ಬಹಿರಂಗಪಡಿಸಲು ವಿಳಂಬ ಮಾಡಿದ ಬಗ್ಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರ: ಕೇರಳದ ಚಿತ್ರರಂಗದಲ್ಲಿನ ಸೆಕ್ಸ್‌ ಹಗರಣದ ಕುರಿತು ನಟಿಯರು ಒಬ್ಬೊಬ್ಬರಾಗಿ ತಮಗಾದ ಅಹಿತಕರ ಅನುಭವ ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಇದೀಗ ಅವರ ಸಾಲಿಗೆ ಸೇರಿಕೊಂಡಿರುವ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್‌, ‘ನಟಿಯರ ಕಾರ್‌ವಾನ್‌ಗಳಲ್ಲಿ ರಹಸ್ಯ ಕ್ಯಾಮೆರಾ ಇರಿಸಲಾಗುತ್ತಿತ್ತು’ ಎಂದು ಆರೋಪಿಸಿದ್ದಾರೆ.

ಶನಿವಾರ ಮಾತನಾಡಿದ ಅವರು, ‘ಮಲಯಾಳಂ ಚಿತ್ರಗಳ ಶೂಟಿಂಗ್‌ ವೇಳೆ ನಟಿಯರ ಕಾರ್‌ವಾನ್‌ಗಳಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿ ಆಕ್ಷೇಪಾರ್ಹ ವೀಡಿಯೊಗಳನ್ನು ಸೆರೆಹಿಡಿಯಲಾಗುತ್ತಿತ್ತು ಹಾಗೂ ನಟಿಯರು ಬಟ್ಟೆ ಬದಲಿಸುವ ವಿಡಿಯೋಗಳನ್ನು ಕೆಲ ನಟರು ತಮ್ಮ ಮೊಬೈಲ್‌ಗಳಲ್ಲಿ ನೋಡುತ್ತಿದ್ದರು. ಹೀಗೆ ವೀಕ್ಷಿಸುತ್ತಿದ್ದುದನ್ನು ನಾನೇ ಖುದ್ದಾಗಿ ಕಂಡಿದ್ದೇನೆ. ಇಂತಹ ಕಿರುಕುಳ ಹಾಗೂ ಕೆಳಮಟ್ಟದ ನಡವಳಿಕೆ ಮಲಯಾಳಂ ಸಿನಿರಂಗದಲ್ಲಿ ಮಾತ್ರವಲ್ಲ, ಅನ್ಯ ಚಿತ್ರರಂಗಗಳಲ್ಲೂ ನಡೆಯುತ್ತದೆ’ ಎಂದರು.

‘ಇದೇ ಕಾರಣಕ್ಕೆ ನಾನು ಕಾರ್‌ವಾನ್‌ ನಿರಾಕರಿಸಿ ತಾವು ತಂಗಿದ್ದ ಹೋಟೆಲ್‌ ಕೋಣೆಗೆ ತೆರಳಿದೆ ಎಂದ ರಾಧಿಕಾ, ನ್ಯಾ। ಹೇಮಾ ವರದಿ ಬಹಿರಂಗಪಡಿಸಲು ತಡ ಮಾಡಿದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು ಹಾಗೂ ಇನ್ನು ಮುಂದೆ ನಟಿಯರೇ ತಮ್ಮ ಸುರಕ್ಷತೆಯ ಹೊಣೆ ಹೊರಬೇಕು. ಈ ಬಗ್ಗೆ ಪುರುಷ ಕಲಾವಿದರು ಮೌನ ಆಗಿದ್ದು ಅಚ್ಚರಿಯ ವಿಚಾರ’ ಎಂದಿದ್ದಾರೆ.

ಆದರೆ ಯಾವುದೇ ಚಿತ್ರದ ಅಥವ ನಟರ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.

ರಾಧಿಕಾರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್‌ಆರ್‌ಎಂ ಪಕ್ಷದ ನಾಯಕಿ ಕೆ.ಕೆ. ರೆಮಾ, ‘ನಟಿಯರು ಕಾರ್‌ವಾನ್‌ ಸುರಕ್ಷಿತವೆಂದು ಭಾವಿಸುವಾಗ ಇದೆಂತಹ ಕ್ರೌರ್ಯ? ಈ ಆರೋಪಗಳನ್ನು ನೋಡುತ್ತಿದ್ದರೆ ಸಿನಿಜಗತ್ತು ದೊಡ್ಡ ಭೂಗತಲೋಕವಾಗಿ ಪರಿವರ್ತಿತವಾಗುತ್ತಿರುವಂತಿದೆ’ ಎಂದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ, ಇದೆಲ್ಲಾ ಗೊತ್ತಿದ್ದರೂ ಇಷ್ಟುದಿನ ಮೌನವಹಿಸಿದ್ದೇಕೆ ಎಂದು ಡಬ್ಬಿಂಗ್‌ ಕಲಾವಿದೆ ಭಾಗ್ಯಲಕ್ಷ್ಮಿ ಪ್ರಶ್ನಿಸಿದ್ದಾರೆ.

ಶಾಸಕ ಮುಕೇಶ್‌ ರಾಜೀನಾಮೆ ಅಗತ್ಯವಿಲ್ಲ: ಸಿಪಿಎಂ ಸ್ಪಷ್ಟನೆ

ತಿರುವನಂತಪುರಂ: ಮಲಯಾಳಂ ನಟಿಯರ ಮೇಲೆ ಅತ್ಯಾಚಾರದ ಆರೋಪ ಹೊತ್ತಿರುವ ನಟ, ಸಿಪಿಎಂ ಶಾಸಕ ಎಂ. ಮುಕೇಶ್‌ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಆದರೆ ತಮ್ಮ ಪಕ್ಷದ ಶಾಸಕ ಮುಕೇಶ್‌ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಿಪಿಎಂ ಹೇಳಿದೆ.ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದ್‌ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ ಒಂದು ವೇಳೆ ಮುಕೇಶ್‌ ನೈತಿಕತೆ ನೆಲೆಯಲ್ಲಿ ರಾಜೀನಾಮೆ ನೀಡಿ, ನಿರಾಪರಾಧಿ ಎಂದು ಸಾಬೀತಾದರೆ, ಮತ್ತೆ ಅದೇ ಸ್ಥಾನಕ್ಕೆ ನೈತಿಕತೆ ಮೇಲೆ ಮರಳುವುದಕ್ಕೆ ಸಾಧ್ಯವಾಗುವುದಿಲ್ಲ. ಶಾಸಕರಾಗಬೇಕಾದರೆ ಚುನಾವಣೆಯಲ್ಲಿ ಗೆದ್ದು ಬರಬೇಕು. ದೇಶದಲ್ಲಿ 16 ಸಂಸದರು 135 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನುವ ಆರೋಪವಿದ್ದರೂ ಯಾರೂ ರಾಜೀನಾಮೆ ನೀಡಿಲ್ಲ. ಹೀಗಾಗಿ ಮುಕೇಶ್‌ ಕೂಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ’ ಎಂದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ನಟ ಮೋಹನ್‌ ಲಾಲ್‌ ಆಗ್ರಹ

ತಿರುವನಂತಪುರ: ‘ತಪ್ಪಿತಸ್ಥರ ವಿರುದ್ಧ ಸಾಕ್ಷ್ಯಗಳು ಲಭಿಸಿದರೆ ಅಂಥವರಿಗೆ ಶಿಕ್ಷೆ ಆಗಲೇಬೇಕು’ ಎಂದು ಮಲಯಾಳಂ ನಟ ಹಾಗೂ ಕಲಾವಿದರ ಸಂಘದ ನಿರ್ಗಮಿತ ಅಧ್ಯಕ್ಷ ಮೋಹನ್‌ ಲಾಲ್‌ ಆಗ್ರಹಿಸಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮಲಯಾಳಂ ಚಿತ್ರರಂಗದಲ್ಲಿ ಇದೆ ಎನ್ನಲಾಗಿರುವ ಪ್ರಭಾವಿಗಳ ಗುಂಪಿನ ಬಗ್ಗೆ ನನಗೇನೂ ತಿಳಿದಿಲ್ಲ ಹಾಗೂ ನಾನದರ ಭಾಗವೂ ಆಗಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ‘ಮಲಯಾಳಂ ಚಿತ್ರೋದ್ಯಮವು ಬೃಹತ್‌ ರಂಗವಾಗಿದ್ದು, ಈಗ ಉದ್ಭವಿಸಿರುವ ಸಮಸ್ಯೆಯನ್ನು ಪರಿಹರಿಸುವುದು ಸಂಘದ ಕೈಯ್ಯಲ್ಲಿ ಸಾಧ್ಯವಿಲ್ಲ. ಜೊತೆಗೆ ನ್ಯಾ। ಹೇಮಾ ಸಮಿತಿಯ ವರದಿಯನ್ನು ಬಿಡುಗಡೆಗೊಳಿಸಿದ್ದು ಸರ್ಕಾರದ ಒಳ್ಳೆಯ ನಿರ್ಧಾರ. ಕಾನೂನು ತನ್ನ ಮುಂದಿನ ಕ್ರಮ ಜರುಗಿಸಲಿದೆ’ ಎಂದರು.

ಮಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ನಟಿಯರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮಾ)ದ ಕೆಲವರ ಮೇಲೆಯೂ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದ ಕಾರಣ ಮೋಹನ್‌ ಲಾಲ್‌ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಟ ರಂಜಿತ್ ವಿರುದ್ಧ ಈಗ ಸಲಿಂಗಕಾಮ ಕೇಸು

ಕಲ್ಲಿಕೋಟೆ : ಮಲಯಾಳಂ ಚಿತ್ರರಂಗದ ಕಾಮಪುರಾಣ ಮುಂದುವರಿದಿದ್ದು, ಪುರುಷ ನಟರೊಬ್ಬರು ನೀಡಿದ ದೂರಿನ ಮೇರೆಗೆ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಅಪರಾಧಕ್ಕಾಗಿ ಎರಡನೇ ಪ್ರಕರಣವನ್ನು ದಾಖಲಿಸಲಾಗಿದೆ.‘ಆಡಿಷನ್‌ ಉದ್ದೇಶಕ್ಕೆ ಎಂದು ನಿರ್ದೇಶಕ ರಣಜಿತ್‌ 2012ರಲ್ಲಿ ಬೆಂಗಳೂರಿಗೆ ನನ್ನನ್ನು ಕರೆಸಿದ್ದರು. ಬೆಂಗಳೂರಿನ ಹೋಟೆಲ್‌ನಲ್ಲಿ ವಿವಸ್ತ್ರಗೊಳ್ಳುವಂತೆ ಹೇಳಿ ನಗ್ನ ಫೋಟೋಗಳನ್ನು ತೆಗೆದಿದ್ದರು. ಇದಕ್ಕೆ ಕಾರಣ ಕೇಳಿದಾಗ ಅದು ಆಡಿಷನ್‌ ಗೆ ಎಂದಿದ್ದರು ಹಾಗೂ ನಂತರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ನನ್ನ ಫೋಟೋಗಳನ್ನು ನಟಿಯೊಬ್ಬರಿಗೂ ನೀಡಿದ್ದರು’ ಎಂದು ದೂರುದಾರ ನಟ ಆರೋಪಿಸಿದ್ದಾರೆ.

ಇತ್ತೀಚೆಗೆ ಇದೇ ನಟ ಈ ಹೇಳಿಕೆಯನ್ನು ಮಾಧ್ಯಮದ ಮುಂದೆ ನೀಡಿದ್ದರು. ಈಗ ಅಧಿಕೃತವಾಗಿ ದೂರು ನೀಡಿದ್ದಾರೆ. ಆದರೆ ಈ ನಟ ಮಾಡಿದ ಆರೋಪವನ್ನು ಫೋಟೋ ಸ್ವೀಕರಿಸಿದ್ದರು ಎನ್ನಲಾದ ನಟಿ ನಿರಾಕರಿಸಿದ್ದಾರೆ.

ತೆಲುಗು ಚಿತ್ರರಂಗದ ಲೈಂಗಿಕ ಕಿರುಕುಳ ವರದಿ ಬಹಿರಂಗ: ಸಮಂತಾ ಆಗ್ರಹ

ಹೈದರಾಬಾದ್‌: ಕೇರಳ ಚಿತ್ರರಂಗದ ಲೈಂಗಿಕ ದೌರ್ಜನ್ಯಗಳನ್ನು ಬಯಲಿಗೆಳೆದ ನ್ಯಾ। ಹೇಮಾ ಸಮಿತಿ ವರದಿಯನ್ನು ಸ್ವಾಗತಿಸಿರುವ ತೆಲುಗು ನಟಿ ಸಮಂತಾ ರುತ್‌ ಪ್ರಭು, ತೆಲಂಗಾಣದಲ್ಲೂ 2019ರಲ್ಲಿ ರಚಿಸಲಾಗಿದ್ದ ಚಿತ್ರರಂಗದ ಲೈಂಗಿಕ ಕಿರುಕುಳ ಕುರಿತ ಉಪಸಮಿತಿ ವರದಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಅಲ್ಲದೆ, ಕೇರಳ ಮಾದರಿಯಂತೆ ತೆಲಂಗಾಣದಲ್ಲೂ ನ್ಯಾಯಾಂಗ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ. ಶನಿವಾರ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದಿರುವ ಅವರು, ‘ತೆಲುಗು ಚಿತ್ರರಂಗದ ಕುರಿತ ಉಪಸಮಿತಿ ವರದಿಯನ್ನು ಸರ್ಕಾರ ಬಯಲು ಮಾಡಬೇಕು. ಇದು ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಮತ್ತು ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಚಿತಪಡಿಸುತ್ತದೆ’ ಎಂದಿದ್ದಾರೆ.