ಸಾರಾಂಶ
ನವದೆಹಲಿ: ಅಗ್ನಿವೀರ ಯೋಜನೆ ಬಗ್ಗೆ ತಮ್ಮ ಟೀಕೆ ಮುಂದುವರಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಹುತಾತ್ಮ ಅಗ್ನಿವೀರ ಅಜಯ ಕುಮಾರ್ ಕುಟುಂಬಕ್ಕೆ ಸಿಕ್ಕಿದ್ದು ವಿಮೆಯೇ ಹೊರತು ಸರ್ಕಾರದ ಪರಿಹಾರ ಅಲ್ಲ ಎಂದಿದ್ದಾರೆ.
ಶುಕ್ರವಾರ ಸಂಜೆ ಟ್ವೀಟ್ ಮಾಡಿರುವ ಅವರು, ‘ಅಜಯ್ ಕುಮಾರ್ ಕುಟುಂಬಕ್ಕೆ ಇದುವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ‘ಪರಿಹಾರ’ ಮತ್ತು ‘ವಿಮೆ’ ನಡುವೆ ವ್ಯತ್ಯಾಸವಿದೆ. ವಿಮಾ ಕಂಪನಿಯಿಂದ ಮಾತ್ರ ಹುತಾತ್ಮರ ಕುಟುಂಬಕ್ಕೆ ಪಾವತಿ ಮಾಡಲಾಗಿದೆ. ಹುತಾತ್ಮ ಯೋಧ ಅಜಯ್ ಕುಮಾರ್ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ನೆರವು ಸಿಕ್ಕಿಲ್ಲ’ ಎಂದಿದ್ದಾರೆ.
ಇತ್ತೀಚೆಗೆ ಸೇನೆಯು 98 ಲಕ್ಷ ರು. ಪರಿಹಾರ ನೀಡಿದ್ದೇವೆ. ಇನ್ನು 67 ಲಕ್ಷ ರು. ಬಾಕಿ ಇದೆ ಎಂದಿತ್ತು. ಅದರ ಬೆನ್ನಲ್ಲೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ.
‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಪ್ರತಿಯೊಬ್ಬ ಹುತಾತ್ಮರ ಕುಟುಂಬವನ್ನು ಗೌರವಿಸಬೇಕು. ಆದರೆ ಮೋದಿ ಸರ್ಕಾರ ಅವರ ವಿರುದ್ಧ ತಾರತಮ್ಯ ಮಾಡುತ್ತಿದೆ. ಸರ್ಕಾರ ಏನೇ ಹೇಳಲಿ, ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದು, ನಾನು ಅದನ್ನು ಎತ್ತಿ ಹಿಡಿಯುತ್ತೇನೆ. ಸಮ್ಮಿಶ್ರ ಪಡೆಗಳನ್ನು ದುರ್ಬಲಗೊಳಿಸಲು ಭಾರತ ಎಂದಿಗೂ ಬಿಡುವುದಿಲ್ಲ’ ಎಂದಿದ್ದಾರೆ.