ಸಾರಾಂಶ
ಮುಂಬೈ: ಜು.12ರಂದು ನಡೆಯಲಿರುವ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಸಮಾರಂಭದಲ್ಲಿ ಸಂಗೀತ ಸುಧೆ ಹರಿಸಲು ಪ್ರಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮುಂಬೈಗೆ ಆಗಮಿಸಿದ್ದಾರೆ. ಮದುವೆಯ ‘ಸಂಗೀತ್’ ಸಮಾರಂಭದಲ್ಲಿ ಪ್ರದರ್ಶನ ನೀಡಲು ಜಸ್ಟಿನ್ ಬರೋಬ್ಬರಿ 83 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಜಸ್ಟಿನ್ ಅವರು 2017ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು. ಅಮೆರಿಕದ ಲಾಸ್ ಏಂಜಲೀಸ್ ನಿವಾಸಿಯಾದ ಬೀಬರ್, ‘ಬೇಬಿ’, ‘ಸಾರಿ’, ‘ಲವ್ ಯುವರ್‌ಸೆಲ್ಫ್’ ಹಾಗೂ ‘ಬಾಯ್‌ಫ್ರೆಂಡ್’ ಆಲ್ಬಂಗಳಿಂದ ಹೆಸರುವಾಸಿಯಾದವರು. 2 ಸಲ ಸಂಗೀತ ಕ್ಷೇತ್ರದ ಪ್ರಸಿದ್ಧ ‘ಗ್ರ್ಯಾಮಿ’ ಪ್ರಶಸ್ತಿ ವಿಜೇತರೂ ಹೌದು.
ಬೀಬರ್ ಜತೆ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕರಾದ ಅಡೇಲೆ, ಡ್ರೇಕ್ ಹಾಗೂ ಲಾನಾ ಡೆ ರೇ ಅವರೂ ಸಂಗೀತ ಪ್ರಸ್ತುತಪಡಿಸಲಿದ್ದಾರೆ.
ಈ ಹಿಂದೆ ಜಾಮ್‌ನಗರದಲ್ಲಿ ನಡೆದ ಅನಂತ್-ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪಾಪ್ ಗಾಯಕಿ ರಿಹಾನಾ ಅವರು ಹಾಡಿ ರಂಜಿಸಿದ್ದರು. ಅವರು 65ರಿಂದ 75 ಕೋಟಿ ರು. ಪಡೆದಿದ್ದರು ಎನ್ನಲಾಗಿತ್ತು.