ಹೆಚ್ಚುವರಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ನೇಮಕ: ಇದೇ ಮೊದಲು

| Published : Jul 05 2024, 12:55 AM IST / Updated: Jul 05 2024, 07:02 AM IST

Parliament
ಹೆಚ್ಚುವರಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ನೇಮಕ: ಇದೇ ಮೊದಲು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಹೆಚ್ಚುವರಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಉಪ ರಾಷ್ಟ್ರೀಯ ಸಲಹೆಗಾರರ ನೇಮಕ ಮಾಡಿ ಆದೇಶ ಹೊರಡಿಸಿದೆ.

ನವದೆಹಲಿ: ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಹೆಚ್ಚುವರಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಉಪ ರಾಷ್ಟ್ರೀಯ ಸಲಹೆಗಾರರ ನೇಮಕ ಮಾಡಿ ಆದೇಶ ಹೊರಡಿಸಿದೆ. ಹೆಚ್ಚುವರಿ ರಾಷ್ಟ್ರೀಯ ಭದ್ರತೆ ಸಲಹೆಗಾರರಾಗಿ ರಾಜಿಂದರ್‌ ಖನ್ನಾ ಮತ್ತು ಉಪ ಭದ್ರತಾ ಸಲಹೆಗಾರರಾಗಿ ಟಿ.ವಿ.ರವಿಚಂದ್ರನ್‌ ಅವರನ್ನು ನೇಮಿಸಲಾಗಿದೆ.

 ಹೆಚ್ಚುವರಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಹುದ್ದೆ ಮೊದಲಿನಿಂದಲೂ ಇತ್ತಾದರೂ ಅದನ್ನು ಸದಾ ಖಾಲಿ ಇಡುತ್ತಲೇ ಬರಲಾಗಿತ್ತು. 1978ನೇ ಸಾಲಿನ ಐಪಿಎಸ್‌ ಅಧಿಕಾರಿಯಾಗಿರುವ ರಾಜಿಂದರ್‌ ಅವರು, 2014-16ರವರೆಗೆ ‘ರಾ’ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪಾಕಿಸ್ತಾನ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಸೂಕ್ಷ್ಮ ಪರಿಣತಿ ಹೊಂದಿದ್ದಾರೆ. ಖನ್ನಾ ಅವರ ಪದೋನ್ನತಿಯಿಂದ ತೆರವಾದ ಉಪ ಸಲಹೆಗಾರರ ಹುದ್ದೆಗೆ ಐಬಿ ಮುಖ್ಯಸ್ಥರಾದ ರವಿಚಂದ್ರನ್‌ ನೇಮಕ ಮಾಡಲಾಗಿದೆ. ಇವರೆಲ್ಲರೂ ಅಜಿತ್‌ ದೋವಲ್‌ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

ಅಡ್ವಾನಿ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಬಿಡುಗಡೆ

ನವದೆಹಲಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿ (96) ಅವರನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಳೆದ ಬುಧವಾರ ಕೂಡಾ ಅಡ್ವಾಣಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮಾರನೇ ದಿನ ಅವರನ್ನು ಬಿಡುಗಡೆ ಮಾಡಲಾಗಿತ್ತು.

ನೀಟ್ ರದ್ದು ಬೇಡ: ಟಾಪರ್‌ ಸೇರಿ 50 ವಿದ್ಯಾಥಿಗಳ ಮೊರೆ

ನವದೆಹಲಿ: ನೀಟ್-ಯುಜಿ ಪರೀಕ್ಷೆ ಬರೆದ ಗುಜರಾತ್ ಮೂಲದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಾದಿತ ಪರೀಕ್ಷೆಯನ್ನು ರದ್ದುಗೊಳಿಸದಂತೆ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಪರೀಕ್ಷೆಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ ವಿದ್ಯಾರ್ಥಿಗಳು ಕೂಡಾ ಇದ್ದಾರೆ.ಪರೀಕ್ಷೆಯಲ್ಲಿ ಅಕ್ರಮ ಎಸಗಿದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಶಿಕ್ಷಣ ಇಲಾಖೆಗೆ ಸೂಚಿಸಬೇಕೆಂದು ವಿದ್ಯಾರ್ಥಿಗಳು ಕೋರಿದ್ದಾರೆ. ವಿವಾದಿತ ಪರೀಕ್ಷೆಯ ನಿರ್ವಹಣೆ, ಉನ್ನತ ಮಟ್ಟದ ತನಿಖೆಗೆ ಕೋರಿ 56 ವಿದ್ಯಾರ್ಥಿಗಳು ಈಗಾಗಲೇ ಸುಪ್ರೀಂಕೋರ್ಟ್‌ಗೆ ಒಟ್ಟು 26 ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳು ಜು.8ರಂದು ವಿಚಾರಣೆಗೆ ಬರಲಿದೆ.

ಆಂಧ್ರಕ್ಕೆ ಹೆಚ್ಚಿನ ಹಣಕಾಸು ನೆರವಿಗೆ ಮೋದಿಗೆ ಸಿಎಂ ನಾಯ್ಡು ಮನವಿ

ನವದೆಹಲಿ: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಟಿಡಿಪಿ ನಾಯಕ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಗುರುವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಈ ವೇಳೆ ರಾಜ್ಯಕ್ಕೆ ವಿಶೇಷ ಸ್ಥಾನಮಾನದ ರೀತಿಯಲ್ಲಿ ಹೆಚ್ಚಿನ ಹಣಕಾಸು ನೆರವು ನೀಡುವಂತೆ ನಾಯ್ಡು, ಪ್ರಧಾನಿಯನ್ನು ಕೋರಿದರು ಎನ್ನಲಾಗಿದೆ. ಭೇಟಿ ಬಳಿಕ ಟ್ವೀಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಾಯ್ಡು ‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗುರುವಾರ ರಚನಾತ್ಮಕವಾಗಿ ಮಾತುಕತೆ ನಡೆಸಲಾಯಿತು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಆಂಧ್ರಪ್ರದೇಶ ಮತ್ತೆ ಶಕ್ತಿ ಕೇಂದ್ರವಾಗಲಿದೆ’ ಎಂದು ನಾಯ್ಡು ಹಂಚಿಕೊಂಡರು.ಈ ಬಾರಿ ಟಿಡಿಪಿ 16 ಸ್ಥಾನ ಗೆದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.