ಸಾರಾಂಶ
ಗಾಜಿಯಾಬಾದ್ : ಮಸೀದಿ ಸಮೀಕ್ಷೆ ವಿವಾದದ ಕಾರಣ ಕೋಮುಗಲಭೆಗೆ ಒಳಗಾಗಿದ್ದ ಉತ್ತರ ಪ್ರದೇಶದ ಸಂಭಲ್‌ಗೆ ಹೊರಟಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವನ್ನು ಉತ್ತರ ಪ್ರದೇಶ ಪೊಲೀಸರು ಗಾಜಿಯಾಬಾದ್ ಬಳಿಯ ಗಾಜಿಪುರ ಗಡಿಯಲ್ಲೇ ತಡೆದರು.
ಹೀಗಾಗಿ ಎಲ್ಲ ನಾಯಕರು ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಸುಮಾರು 2 ಗಂಟೆಗಳ ಕಾಲ ತಂಗಿ, ನಂತರ ದೆಹಲಿಗೆ ಮರಳಿದರು.
ರಾಹುಲ್ ಆಕ್ರೋಶ:
ಗಾಜಿಪುರ ಗಡಿಯಲ್ಲಿ ತಡೆದ ನಂತರ ಪೊಲೀಸರೊಂದಿಗೆ ಮಾತನಾಡಿದ ರಾಹುಲ್, ‘ಸಂಭಲ್‌ಗೆ ಪೊಲೀಸ್ ರಕ್ಷಣೆಯಲ್ಲಿ ಏಕಾಂಗಿಯಾಗಿ ಹೋಗಲು ಸಿದ್ಧ’ ಎಂದು ಹೇಳಿದರು. ಆದರೆ ಪೊಲೀಸರು ಅನುಮತಿಸಲಿಲ್ಲ. ಏಕೆಂದರೆ ಡಿ.10ರವರೆಗೆ ಸಂಭಲ್‌ಗೆ ಬಾಹ್ಯ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ.
ಬಳಿಕ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಸುದ್ದಿಗಾರರ ಜತೆ ಮಾತನಾಡಿದ ರಾಹುಲ್, ‘ಪೊಲೀಸರು ತಡೆದ ಕಾರಣ ವಿರೋಧ ಪಕ್ಷದ ನಾಯಕನ ಹಕ್ಕಿಗೆ ಚ್ಯುತಿ ಆದಂತಾಗಿದೆ. ಪೊಲೀಸರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನಾವು ಸಂಭಲ್‌ಗೆ ಹೋಗಿ ಅಲ್ಲಿ ಏನಾಯಿತು ಎಂಬುದನ್ನು ನೋಡಿ, ಜನರನ್ನು ಭೇಟಿಯಾಗಲು ಬಯಸುತ್ತೇವೆ. ನಮಗೆ ನೀಡಿರುವ ತಡೆಯು ಸಂವಿಧಾನವನ್ನು ಕೊನೆಗೊಳಿಸುವ ಪ್ರಯತ್ನ. ಆದರೆ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದರು.
ಉತ್ತರ ಪ್ರದೇಶದ ಬಿಜೆಪಿ ನಾಯಕರು ಕಾಂಗ್ರೆಸ್ ನಡೆಯನ್ನು ‘ಮುಸ್ಲಿಂ ವೋಟ್ ಬ್ಯಾಂಕ್ ಸಮಾಧಾನಪಡಿಸುವ ‘ನಾಟಕ’ ಎಂದು ಟೀಕಿಸಿದ್ದಾರೆ.