ಸಾರಾಂಶ
ಸಂಸದರಾಗಿ ಸಂವಿಧಾನ ಹಿಡಿದು ಪ್ರಮಾಣ ಸ್ವೀಕರಿಸಿದ ರಾಹುಲ್ ಗಾಂಧಿ ‘ಜೈ ಹಿಂದ್, ಜೈ ಸಂವಿಧಾನ್’ ಘೋಷಣೆ ಕೂಗಿದ್ದಾರೆ.
ನವದೆಹಲಿ: 18ನೇ ಲೋಕಸಭೆ ಅಧಿವೇಶನದ 2ಣೇ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಲೋಕಸಭಾ ಸದಸ್ಯರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ‘ಜೋಡೋ ಜೋಡೋ ಭಾರತ್ ಜೋಡೋ’ ಎಂಬ ಘೋಷಣೆಗಳ ನಡುವೆ ಪ್ರಮಾಣ ಮಾಡಿದ ಅವರು ಕೊನೆಯಲ್ಲಿ ‘ಜೈ ಹಿಂದ್, ಜೈ ಸಂವಿಧಾನ್’ ಎಂಬ ಘೋಷಣೆ ಕೂಗಿದ್ದಾರೆ.
ರಾಹುಲ್ ವಯನಾಡು ಹಾಗೂ ರಾಯ್‌ಬರೇಲಿ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಹಾಗೂ ವಯನಾಡ್ ತ್ಯಜಿಸಿ ರಾಯ್‌ಬರೇಲಿ ಉಳಿಸಿಕೊಂಡಿದ್ದರು.ಇದಕ್ಕೂ ಮುನ್ನ ಅಖಿಲೇಶ್ ಯಾದವ್ (ಎಸ್ಪಿ), ಮಹುವಾ ಮೊಯಿತ್ರಾ (ಟಿಎಂಸಿ) ಹೇಮಾಮಾಲಿನಿ (ಬಿಜೆಪಿ), ಸುಪ್ರಿಯಾ ಸುಳೆ (ಎನ್ಸಿಪಿ), ನಾರಾಯಣ್ ರಾಣೆ ಹಾಗೂ ಶ್ರೀಕಾಂತ್ ಶಿಂಧೆ (ಶಿವ ಸೇನೆ), ಅರವಿಂದ್ ಸಾವಂತ್ (ಶಿವ ಸೇನೆ ಉದ್ಭವ್ ಬಣ) ಸೇರಿ ಅನೇಕರು ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ಪಕ್ಷೇತರ ಸಂಸದ ಪಪ್ಪು ಯಾದವ್, ನೀಟ್ ಮರುಪರೀಕ್ಷೆಗೆ ಆಗ್ರಹಿಸಿ ‘ರೀನೀಟ್’ ಎಂದು ಬರೆದಿದ್ದ ಟೀಶರ್ಟ್ ಧರಿಸಿ ಶಪಥಗ್ರಹಣ ಮಾಡಿ ಗಮನ ಸೆಳೆದರು.ಈ ವೇಳೆ ಹಲವು ಸಂಸದರು ಜೈ ಭೀಮ್, ಜೈ ಮಹಾರಾಷ್ಟ್ರಾ, ಜೈ ಶಿವಾಜಿಗಳಂತಹ ಘೋಷಣೆ ಕೂಗಿದರು. ಆಗ ಪ್ರಮಾಣದ ಪ್ರತಿಯಲ್ಲಿ ಇರುವುದನ್ನು ಮಾತ್ರ ಓದಬೇಕೆಂದು ಹಂಗಾಮಿ ಸಭಾಧ್ಯಕ್ಷ ಸೂಚಿಸಿದರು.