ಸಾರಾಂಶ
ಧ್ವಂಸಗೊಂಡ ಭಾರತದ ವಿಮಾನಗಳ ಲೆಕ್ಕ ನೀಡಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ‘ವೈಮಾನಿಕ ದಾಳಿಯ ಕುರಿತು ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಿದ ಕಾರಣ, ಆಪರೇಷನ್ ಸಿಂದೂರ ವೇಳೆ ಭಾರತದ ಕಳೆದುಕೊಂಡಿರುವ ವಿಮಾನಗಳ ಲೆಕ್ಕವನ್ನು ಕೇಂದ್ರ ಸರ್ಕಾರ ನೀಡಬೇಕು. ಸಂಖ್ಯೆಯ ವಿಚಾರದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೌನ ವಹಿಸಿರುವುದು ಶಾಪಗ್ರಸ್ತ. ಕೂಡಲೇ ಅವರು ಧ್ವಂಸಗೊಂಡ ಭಾರತದ ವಿಮಾನಗಳ ಲೆಕ್ಕ ನೀಡಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ‘ಜೈಶಂಕರ್ ಅವರ ಮೌನ ಶಾಪವಿದ್ದಂತೆ. ನಾನು ಮತ್ತೊಮ್ಮೆ ಕೇಳುವುದಕ್ಕೆ ಬಯಸುತ್ತೇನೆ, ಆಪರೇಷನ್ ಸಿಂದೂರದ ವೇಳೆ ಭಾರತ ಎಷ್ಟು ವಿಮಾನಗಳನ್ನು ಕಳೆದುಕೊಂಡಿದೆ? ಇದು ಲೋಪವಲ್ಲ. ಅಪರಾಧ. ರಾಷ್ಟ್ರಕ್ಕೆ ಸತ್ಯ ತಿಳಿಯಬೇಕು’ ಎಂದಿದ್ದಾರೆ.
ಇದಕ್ಕೂ ಮುನ್ನ ಜೈಶಂಕರ್ ನೀಡಿದ್ದರು ಎನ್ನಲಾದ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದ ರಾಹುಲ್, ‘ದಾಳಿಗೆ ಮುಂಚೆ ಭಾರತವು ಪಾಕ್‌ಗೆ ದಾಳಿ ನಡೆಸುವ ಮಾಹಿತಿ ನೀಡಿತ್ತು’ ಎಂದಿದ್ದರು. ಆದರೆ ವಿದೇಶಾಂಗ ಸಚಿವಾಲಯವು, ‘ಅದು ಮಾಹಿತಿಯಲ್ಲ. ಎಚ್ಚರಿಕೆಯಾಗಿತ್ತು’ ಎಂದಿತ್ತು.
ಪಾಕ್ ಭಾಷೆಯಲ್ಲಿ ರಾಹುಲ್ ನುಡಿ:
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದ್ದು, ‘ಪಾಕಿಸ್ತಾನಿ ಭಾಷೆಯಲ್ಲಿ ರಾಹುಲ್ ಮಾತನಾಡುತ್ತಿದ್ದಾರೆ. ಜೈ ಶಂಕರ್ ವಿರುದ್ಧ ರಾಹುಲ್ ಗಾಂಧಿ ಸುಮ್ಮನೆ ಆರೋಪಿಸುತ್ತಿದ್ದಾರೆ, ಸಚಿವರು ಸದ್ಯ ವಿದೇಶದಲ್ಲಿದ್ದು, ಅವರು ಉತ್ತರ ನೀಡಲು ಹೇಗೆ ಸಾಧ್ಯ? ರಾಹುಲ್ ಕಾಟಾಚಾರಕ್ಕೆ ಈ ಹೇಳಿಕೆ ನೀಡುತ್ತಿದ್ದಾರೆ’ ಎಂದಿದೆ.