ಅಪಘಾತ ಮಾರ್ಗದಲ್ಲಿ ‘ಕವಚ್‌’ ವ್ಯವಸ್ಥೆ ಇರಲಿಲ್ಲ

| Published : Jun 18 2024, 12:57 AM IST / Updated: Jun 18 2024, 05:11 AM IST

ಅಪಘಾತ ಮಾರ್ಗದಲ್ಲಿ ‘ಕವಚ್‌’ ವ್ಯವಸ್ಥೆ ಇರಲಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರೈಲು ಅಪಘಾತಗಳನ್ನು ಸ್ವಯಂಚಾಲಿತವಾಗಿ ತಡೆಯುವ ರಕ್ಷಾ ಕವಚ ಅಳವಡಿಕೆಯ ಮಹತ್ವವನ್ನು ಸೋಮವಾರದ ಅಪಘಾತ ಮತ್ತೆ ಒತ್ತಿ ಹೇಳಿದೆ.

 ನವದೆಹಲಿ :  ರೈಲು ಅಪಘಾತಗಳನ್ನು ತಡೆಯುವ ಕವಚ್‌ ವ್ಯವಸ್ಥೆ ಸೋಮವಾರ ಕಾಂಚನಜುಂಗಾ ರೈಲು ದುರಂತ ಸಂಭವಿಸಿ ದೆಹಲಿ-ಗುವಾಹಟಿ ಮಾರ್ಗದಲ್ಲಿ ಇರಲಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ. ಹೀಗಾಗಿ ರೈಲು ಅಪಘಾತಗಳನ್ನು ಸ್ವಯಂಚಾಲಿತವಾಗಿ ತಡೆಯುವ ರಕ್ಷಾ ಕವಚ ಅಳವಡಿಕೆಯ ಮಹತ್ವವನ್ನು ಸೋಮವಾರದ ಅಪಘಾತ ಮತ್ತೆ ಒತ್ತಿ ಹೇಳಿದೆ.

‘ದೇಶದ ಹಲವು ಕಡೆ ರೈಲು ದುರಂತಗಳನ್ನು ತಪ್ಪಿಸುವ ಸಲುವಾಗಿ ಸ್ವಯಂ ನಿಯಂತ್ರಣಾ ತಂತ್ರಜ್ಞಾನ ‘ಕವಚ್‌’ ಅನುಷ್ಠಾನ ಮಾಡಲಾಗುತ್ತಿದೆ. ಆದರೆ ಗುವಾಹಟಿಯಿಂದ ದೆಹಲಿಗೆ ಸಾಗುವ ಮಾರ್ಗದಲ್ಲಿ ಇನ್ನೂ ಅಳಡಿಸಿಲ್ಲ. ಈ ವರ್ಷಾಂತ್ಯದ ವೇಳೆಗೆ ಅಳವಡಿಕೆ ಮಾಡಲಾಗುವುದು’ ಎಂದು ರೈಲ್ವೆ ಮಂಡಳಿ ಅಧ್ಯಕ್ಷೆ ಜಯಾ ವರ್ಮಾ ಸಿನ್ಹಾ ಮಾಹಿತಿ ನೀಡಿದ್ದಾರೆ.

ಅಲ್ಲದೆ ಗೂಡ್ಸ್‌ ರೈಲಿನ ಚಾಲಕ ಸಿಗ್ನಲ್‌ ನಿರ್ಲಕ್ಷಿಸಿ ಮುಂದೇ ಸಾಗಿದ್ದೇ ದುರಂತಕ್ಕೆ ಕಾರಣ ಇರುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.

ಕವಚ್‌ ಎಂದರೇನು?

ಕವಚ್‌ ಎಂಬುದು ಸ್ವಯಂಚಾಲಿತ ರೈಲು ಸುರಕ್ಷಾ ತಂತ್ರಜ್ಞಾನ. ಅಪಾಯಕಾರಿ ಸನ್ನಿವೇಶಗಳಲ್ಲಿ ರೈಲು ದುರಂತವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನದ ಪ್ರಕಾರ, ಹಳಿಗಳ ಮೇಲೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ ಟ್ಯಾಗ್ ಅಳವಡಿಸಲಾಗುತ್ತದೆ. ಯಾವುದೇ ರೈಲು ಹಳಿಯ ಮೇಲೆ ಸಂಚರಿಸಿದ 5 ಕಿ.ಮೀ ಮುಂದೆ/ಹಿಂದೆ ಮತ್ತೊಂದು ರೈಲು ಚಲಿಸುತ್ತಿದ್ದರೆ, ಅಂತಹ ರೈಲನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.