ಹಿಮಾಚಲದಲ್ಲಿ ಮತ್ತಷ್ಟು ಮಳೆ : 2 ಸಾವು

| N/A | Published : Sep 03 2025, 01:01 AM IST

ಸಾರಾಂಶ

ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ಸುರಿದ ಭೀಕರ ಮಳೆಯಿಂದಾಗಿ ರಾಜ್ಯಾದ್ಯಂತ ಅವಾಂತರ ಸೃಷ್ಟಿಯಾಗಿದೆ. ಮನೆ ಕುಸಿದು ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ.

 ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ಸುರಿದ ಭೀಕರ ಮಳೆಯಿಂದಾಗಿ ರಾಜ್ಯಾದ್ಯಂತ ಅವಾಂತರ ಸೃಷ್ಟಿಯಾಗಿದೆ. ಮನೆ ಕುಸಿದು ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ.

ಮನೆ ಕುಸಿದು 2 ಸಾವು:

ಸೋಲನ್ ಜಿಲ್ಲೆಯಲ್ಲಿ ಮನೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕುಲ್ಲುವಿನ ಧಾಲ್‌ಪುರದಲ್ಲಿ ಮನೆ ಕುಸಿದು, ಮಣ್ಣಿನಡಿ ಸಿಲುಕಿದ್ದ ದಂಪತಿಗಳಲ್ಲಿ ಪತ್ನಿ ಸಾವನ್ನಪ್ಪಿದರೆ, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನಾಲಿಯ 9 ಹಳ್ಳಿಗಳು ಮುಳುಗಡೆಯಾಗಿದ್ದು, ಮನಾಲಿ-ಲೇಹ್ ಸಂಚಾರ ಸ್ಥಗಿತವಾಗಿದೆ.

ರಸ್ತೆ ಸಂಚಾರ ಸ್ಥಗಿತ:

ತೀವ್ರ ಮಳೆಯಿಂದಾಗಿ 4 ರಾಷ್ಟ್ರೀಯ ಹೆದ್ದಾರಿ ಸೇರಿ 1,337 ರಸ್ತೆಗಳ ಸಂಚಾರ ಸ್ಥಗಿತವಾಗಿದೆ. ಶಿಮ್ಲಾ-ಕಲ್ಕಾ ಮಾರ್ಗದ ರೈಲುಗಳನ್ನು ಸೆ.5ರವರೆಗೂ ನಿರ್ಬಂಧಿಸಲಾಗಿದೆ. ಚಂಬಾ ಜಿಲ್ಲೆಯಲ್ಲಿ ಸಿಲುಕಿರುವ ಸುಮಾರು 5,000 ಮಣಿಮಹೇಶ್ ಯಾತ್ರಿಕರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲರ್ಟ್ ಘೋಷಣೆ:

ಕಂಗ್ರಾ, ಮಂಡಿ, ಸಿರ್‌ಮೌರ್‌ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಮಳೆ ತೀವ್ರವಾಗುವ ನಿರೀಕ್ಷೆಯಿರುವುದರಿಂದ ಕೇಸರಿ ಅಲರ್ಟ್‌ ಮತ್ತು ಊನಾ, ಬಿಲಾಸ್‌ಪುರ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಶಿಮ್ಲಾದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬುಧವಾರ ಮುಚ್ಚಲು ಆದೇಶಿಸಲಾಗಿದೆ.

Read more Articles on